PHOTOS| ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಜಾಬ್​ ಸಿಎಂ: ಸರಳವಾಗಿ ಮನೆಯಲ್ಲೇ ನೆರವೇರಿತು 2ನೇ ಮದುವೆ

Punjab CM
Published on

ಚಂಡೀಗಢ: ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಮತ್ತು ಡಾ. ಗುರುಪ್ರೀತ್​ ಕೌರ್ ಗುರುವಾರ (ಜುಲೈ 7) ಸಪ್ತಪದಿ ತುಳಿದರು. ಚಂಡೀಗಢ್​ನಲ್ಲಿರುವ ಭಗವಂತ್​ ಮಾನ್ ಅವರ ನಿವಾಸದಲ್ಲಿ ಮದುವೆ ಸಮಾರಂಭ ಸರಳವಾಗಿ ನೆರವೇರಿತು.

ಎಎಪಿ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಇದೊಂದು ಖಾಸಗಿ ಸಮಾರಂಭವಾಗಿದ್ದು, ಕೆಲವೇ ಗಣ್ಯರು ಹಾಗೂ ಎರಡು ಕುಟುಂಬಗಳ ಆಪ್ತರ ಸಮ್ಮುಖದಲ್ಲಿ ಭಗವಂತ್​ ಮಾನ್ ಮತ್ತು ಗುರುಪ್ರೀತ್​ ಕೌರ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಧು ಗುರುಪ್ರೀತ್​ ಕೌರ್​ ಕಡುಗೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದರೆ, ಸಿಎಂ ಭಗವಂತ್​ ಮಾನ್​ ಅವರು ಹೊಂಬಣ್ಣದ ಶೆರ್ವಾನಿಯಲ್ಲಿ ಮಿಂಚಿದರು. ಮಾನ್​ ಅವರು ಖಡ್ಗ ಹಿಡಿದು ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋವೊಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

48 ವರ್ಷದ ಮುಖ್ಯಮಂತ್ರಿ ಭಗವಂತ್​ ಮಾನ್​ ಈ ಹಿಂದೆ ಸ್ಟ್ಯಾಂಡ್​ ಅಪ್​​ ಕಾಮಿಡಿಯನ್​ ಆಗಿದ್ದರು. 6 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಯಿಂದ ಡಿವೋರ್ಸ್​ ಪಡೆದುಕೊಂಡಿದ್ದಾರೆ. ಇದು ಅವರ ಎರಡನೇ ಮದುವೆಯಾಗಿದ್ದು, 32 ವರ್ಷದ ಗುರುಪ್ರೀತ್​ ಕೌರ್​ ಮತ್ತು 48 ವರ್ಷದ ಭಗವಂತ್​ ಮಾನ್​ ನಡುವೆ 16 ವರ್ಷಗಳ ವಯಸ್ಸಿನ ಅಂತರವಿದೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಗುರುಪ್ರೀತ್​ ಕೌರ್​ ಕುರುಕ್ಷೇತ್ರ ಜಿಲ್ಲೆಯ ಪೆಹೊವಾ ಮೂಲದವರು. ಅವರ ತಂದೆ ಇಂದ್ರಜಿತ್​ ಸಿಂಗ್​ ಓರ್ವ ರೈತ. ಅವರ ತಾಯಿ ರಾಜ್​ ಕೌರ್​ ಗೃಹಿಣಿ. ಗುರುಪ್ರೀತ್​ ಕೌರ್​ಗೆ ಇಬ್ಬರು ಸಹೋದರಿಯರಿದ್ದಾರೆ. ಇಬ್ಬರು ಕೂಡ ವಿದೇಶದಲ್ಲಿದ್ದಾರೆ. ಮಾನ್​ ಅವರ ನಿಕಟ ಮೂಲಗಳ ಪ್ರಕಾರ, ಎರಡೂ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಸಂಬಂಧ ಇದೆ.

ಹರಿಯಾಣದ ಮೌಲಾನಾದಲ್ಲಿರುವ ಮಹಾರಿಷಿ ಮಾರ್ಕಂಡೇಶ್ವರ್​ ಮೆಡಿಕಲ್​ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾಳೆ. ಆಕೆ ಚಿನ್ನದ ಪದಕ ವಿಜೇತೆ ಎಂದು ಅವರ ಅಂಕಲ್ ಗುರಿಂದರ್​ ಜೀತ್​​ ತಿಳಿಸಿದ್ದಾರೆ.

ಆಮ್​ ಆದ್ಮಿ ಪಕ್ಷದ ನಾಯಕರಾದ ಭಗವಂತ್ ಮಾನ್​, ಇತ್ತೀಚಿಗೆ ನಡೆದ ಪಂಜಾಬ್​ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನ ಗೆಲ್ಲಿಸಿಕೊಂಡು ದಾಖಲೆ ಬರೆದಿದ್ದರು. ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಗುರುಪ್ರೀತ್​ ಅವರು ಭಗವಂತ್ ಮಾನ್ ಅವರಿಗೆ ಸಹಾಯ ಮಾಡಿದರು ಎಂದು ಮೂಲಗಳು ಹೇಳಿವೆ.

ಭಗವಂತ್ ಮಾನ್​ ಅವರಿಗೆ ಈಗಾಗಲೇ ಇಂದ್ರಪ್ರೀತ್ ಕೌರ್ ಎಂಬುವರ ಜತೆ ಮದುವೆ ಆಗಿತ್ತು. ಇವರಿಬ್ಬರ ಸಂಬಂಧ 2015ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಮುರಿದು ಬಿದ್ದಿತ್ತು. ಇವರ ಮಾಜಿ ಪತ್ನಿ ಹಾಗೂ ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. 6 ವರ್ಷದಿಂದ ಏಕಾಂಗಿಯಾಗಿದ್ದ ಭಗವಂತ್ ಮಾನ್​ ಅವರು ಇದೀಗ ಮತ್ತೊಂದು ಮದ್ವೆ ಆಗಿದ್ದಾರೆ. ತಾಯಿ ಹಾಗೂ ಸಹೋದರಿ ಇಬ್ಬರೂ ಮತ್ತೊಂದು ಮದ್ವೆ ಆಗಲು ಒಪ್ಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net