ಪ್ರಿಯಕರನನ್ನು ನಂಬಿ ಸರ್ವಸ್ವವನ್ನು ಅರ್ಪಿಸಿದ ಪ್ರೇಯಸಿ: ಗರ್ಭಪಾತ ಮಾಡಿಸಿಕೊಳ್ಳುವಾಗ ನಡೆಯಿತು ದುರಂತ

Pregnant
Published on

ಹೈದರಾಬಾದ್​: ಪ್ರೀತಿಯ ಹೆಸರಲ್ಲಿ ಯುವತಿಯನ್ನು ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಗರ್ಭಿಣಿಯಾಗಲು ಕಾರಣನಾದ ಯುವಕನೊಬ್ಬ ತನ್ನ ತಪ್ಪು ಮರೆಮಾಚಿಕೊಳ್ಳಲು ಯುವತಿಗೆ ಗರ್ಭಪಾತ ಮಾಡಿಸುವಾಗ ಚಿಕಿತ್ಸೆ ವಿಫಲವಾಗಿ ಆಕೆ ದುರಂತ ಸಾವಿಗೀಡಾಗಿರುವ ಅಮಾನವೀಯ ಘಟನೆ ತೆಲಂಗಾಣದ ಭದ್ರಾದ್ರಿ ಕೊಟಗುಡೆಂ ಜಿಲ್ಲೆಯ ಭದ್ರಾಚಲಂನಲ್ಲಿ ನಡೆದಿದೆ.

ಪೊಲೀಸ್​ ಮೂಲಗಳ ಪ್ರಕಾರ ಭೂಕ್ಯಾ ನಂದು ಎಂಬ ಯುವಕ ದ್ವಿತೀಯ ವರ್ಷದ ಪದವಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಯುವತಿ ಆತನನ್ನು ತುಂಬಾ ನಂಬಿದ್ದಳು. ಹೀಗಾಗಿ ತನ್ನ ಸರ್ವಸ್ವವನ್ನು ಆತನಿಗೆ ಅರ್ಪಿಸಿದ್ದಳು. ಆದರೆ, ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪಿ ನಂದು, ಯುವತಿಯನ್ನು ಗರ್ಭಿಣಿ ಮಾಡಿದನು.

ಇದಾದ ಬಳಿಕ ಈ ವಿಚಾರ ಎಲ್ಲರಿಗೂ ತಿಳಿದರೆ ತನ್ನ ಮಾನ ಮರ್ಯಾದೆ ಹೋಗುತ್ತದೆ ಅಂದುಕೊಂಡ ಆರೋಪಿ ನಂದು, ಹೇಗಾದರೂ ಗರ್ಭಪಾತ ಮಾಡಿಸಬೇಕೆಂದು ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತಕ್ಕೆ ಸಕಲ ವ್ಯವಸ್ಥೆಯನ್ನು ಮಾಡುತ್ತಾನೆ. ಅದರಂತೆ ಗರ್ಭಪಾತ ಮಾಡಿಸುವಾಗ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಾಳೆ.

ಈ ವಿಚಾರ ಗೊತ್ತಾಗುತ್ತಿದ್ದಂತೆ ಆರೋಪಿ ನಂದು ಎಸ್ಕೇಪ್​ ಆಗಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net