

ಹೈದರಾಬಾದ್: ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನಟ ಹಾಗೂ ರಾಜಕಾರಣಿ ಪ್ರಕಾಶ್ ರಾಜ್ ಅವರು ಶಾಕಿಂಗ್ ಕಾಮೆಂಟ್ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ ಅವರು ನಿದ್ರಾ ರೋಗದಿಂದ ಬಳಲುತ್ತಿದ್ದಾರೆ. ಮೊದಲು ಅವರಿಗೆ ಚಿಕಿತ್ಸೆ ಕೊಡಿಸಿ ಎಂದು ಬಿಜೆಪಿ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಪ್ರಧಾನಿ ಮೋದಿ ಕುರಿತು ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ನೀಡಿದ ಹೇಳಿಕೆಗೆ ಪ್ರತಿಯಾಗಿ ಪ್ರಕಾಶ್ ರಾಜ್ ಈ ಹೇಳಿಕೆಯನ್ನು ನೀಡಿದ್ದಾರೆ. ಹಾಗಾದರೆ, ಚಂದ್ರಕಾಂತ್ ಪಾಟೀಲ್ ಹೇಳಿದ್ದೇನು ಎಂದು ನೋಡುವುದಾರೆ, ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ್ದ ಪಾಟೀಲ್, ಮೋದಿ ಅವರು ದಿನದ 22 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ಕೇವಲ 2 ಗಂಟೆ ಮಾತ್ರ ನಿದ್ರೆ ಮಾಡುತ್ತಾರೆ ಎಂದು ಪ್ರಧಾನಿಯನ್ನ ಹೊಗಳಿದ್ದರು.
ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್, ದಯವಿಟ್ಟು ಸ್ವಲ್ಪ ಸಾಮಾನ್ಯ ಜ್ಞಾನವನ್ನು ಬಳಸಿ, ಇದೊಂದು ನಿದ್ರಾ ಸಮಸ್ಯೆ ಇರಬಹುದು. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ನಿದ್ರಾಹೀನತೆ ಎಂದು ಕರೆಯಲಾಗುತ್ತದೆ. ಇದರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಬೇಡಿ. ರೋಗದಿಂದ ಬಳಲುತ್ತಿರುವ ನಿಮ್ಮ ನಾಯಕರಿಗೆ ಮೊದಲು ಚಿಕಿತ್ಸೆ ಕೊಡಿಸಿ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಇದೀಗ ಪ್ರಕಾಶ್ ರಾಜ್ ಅವರ ಟ್ವೀಟ್ ವೈರಲ್ ಆಗಿದೆ. ಈ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು. ಅದೂ ಕೂಡ ವೈರಲ್ ಆಗಿತ್ತು. ಕಾಶ್ಮೀರ್ ಫೈಲ್ಸ್ ಚಿತ್ರದಂತೆ ಗೋಧ್ರಾ ಫೈಲ್ಸ್, ದೆಹಲಿ ಫೈಲ್ಸ್, ಜಿಎಸ್ಟಿ ಫೈಲ್ಸ್, ಡಿಮಾನೀಟೈಸ್ ಫೈಲ್ಸ್, ಕೋವಿಡ್ ಫೈಲ್ಸ್ ಮತ್ತು ಗಂಗಾ ಫೈಲ್ಸ್ ಚಿತ್ರಗಳನ್ನು ತೆಗೆಯಿರಿ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದರು. (ಏಜೆನ್ಸೀಸ್)