

ಅಡಿಸ್ ಅಬಾಬ: ವಿಮಾನ ಹಾರಾಟದ ವೇಳೆ ಇಬ್ಬರು ಪೈಲಟ್ ನಿದ್ರೆಗೆ ಜಾರಿದ ಪರಿಣಾಮ ಸುಡಾನ್ನಿಂದ ಇಥೋಪಿಯಾಗೆ ತೆರಳುವಾಗ ಲ್ಯಾಂಡಿಂಗ್ ತಪ್ಪಿಸಿಕೊಂಡ ವಿರಾಳಾತಿವಿರಳ ಘಟನೆ ಬೆಳಕಿಗೆ ಬಂದಿದೆ.
ಇಂಥದ್ದೊಂದು ಆಘಾತಕಾರಿ ವಿದ್ಯಾಮಾನಕ್ಕೆ ಇಥೋಪಿಯನ್ ಏರ್ಲೈನ್ಸ್ ಬೋಯಿಂಗ್ 737-800 ವಿಮಾನ ಸಾಕ್ಷಿಯಾಗಿದೆ. ವಿಮಾನವು ಸುಡಾನ್ನ ಖರ್ತೌಮ್ನಿಂದ ಇಥೋಪಿಯಾ ರಾಜಧಾನಿ ಅಡಿಸ್ ಅಬಾಬಗೆ ತೆರಳುತ್ತಿತ್ತು. ಸುಮಾರು 37 ಸಾವಿರ ಅಡಿ ಎತ್ತರದಲ್ಲಿ ಆಟೋಪೈಲಟ್ ಮೋಡ್ನಲ್ಲಿ ಹಾರಾಟ ನಡೆಸುತ್ತಿತ್ತು. ಆಗಸ್ಟ್ 15ರಂದು ಅಡಿಸ್ ಅಬಾಬದ ಬೊಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ನಿಗದಿತ ಸಮಯದಲ್ಲಿ ವಿಮಾನ ಇಳಿಯಲೇ ಇಲ್ಲ.
ಯಾವಾಗ ವಿಮಾನ ಇಳಿಯಲಿಲ್ಲವೋ ಗಾಬರಿಗೊಂಡ ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ವಿಮಾನದ ಪೈಲಟ್ಗಳನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಅನೇಕ ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗುವುದಿಲ್ಲ. ಆದಾಗ್ಯೂ ಇಳಿಯಬೇಕಾದ ರನ್ವೇ ಬಿಟ್ಟು ವಿಮಾನ ಮುಂದಕ್ಕೆ ಸಾಗಿದ್ದರಿಂದ ಎಚ್ಚರಿಕೆ ಗಂಟೆ ಬಡಿದುಕೊಳ್ಳುತ್ತದೆ. ಇದರಿಂದಾಗಿ ಪೈಲಟ್ಗಳಿಗೆ ಎಚ್ಚರವಾಗುತ್ತದೆ. ಸುಮಾರು 25 ನಿಮಿಷಗಳು ತಡವಾಗಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತದೆ.
ಕರ್ತವ್ಯ ಲೋಪ ಎಸಗಿದ ಪೈಲಟ್ಗಳಿಬ್ಬರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಇಥೋಪಿಯಾ ಏರ್ಲೈನ್ಸ್ ಮಾಧ್ಯಮ ಹೇಳಿಕೆ ನೀಡಿದೆ. ಅದೃಷ್ಟವಶಾತ್ ಪೈಲಟ್ಗಳ ನಿರ್ಲಕ್ಷ್ಯದಿಂದ ಸಂಭವಿಸುತ್ತಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. (ಏಜೆನ್ಸೀಸ್)