

ನ್ಯೂಯಾರ್ಕ್: ನಗರ ಪ್ರದೇಶದಲ್ಲೇ ವಿಮಾನ ಪತನ ಮಾಡುವುದಾಗಿ ಪೈಲಟ್ ಓರ್ವ ಬೆದರಿಕೆ ಹಾಕಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಪೈಲಟ್ ಬೆದರಿಕೆಯಿಂದ ಕೆಲ ಕಾಲ ಯುಎಸ್ ನಗರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಬೆದರಿಕೆ ಹಾಕಿದ ಪ್ರದೇಶದಿಂದ ಜನರನ್ನು ಸ್ಥಳಂತಾರ ಸಹ ಮಾಡಲಾಗಿತ್ತು.
ಅಂದಹಾಗೆ ಈ ಘಟನೆ ಯುನೈಟೆಡ್ ಸ್ಟೇಟ್ಸ್ನ ಈಶಾನ್ಯ ಮಿಸ್ಸಿಸ್ಸಿಪಿಯಲ್ಲಿರುವ ತುಪೆಲೊ ನಗರದಲ್ಲಿ ನಡೆದಿದೆ. ನಗರದ ಪಶ್ಚಿಮ ಭಾಗದಲ್ಲಿರುವ ವಾಲ್ಮಾರ್ಟ್ಗೆ ವಿಮಾನ ಪತನ ಮಾಡುವುದಾಗಿ ಪೈಲಟ್ ಬೆದರಿಕೆ ಹಾಕಿದ್ದ. ಇದರ ಬೆನ್ನಲ್ಲೇ ಮಾರ್ಟ್ನಲ್ಲಿದ್ದ ಜನರನ್ನು ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರ ಮಾಡಲಾಯಿತು ಎಂದು ಸ್ಥಳೀಯ ಪೊಲೀಸ್ ಇಲಾಖೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪೈಲಟ್ ಜೊತೆ ಪೊಲೀಸ್ ಅಧಿಕಾರಿಗಳು ನೇರವಾಗಿ ಮಾತುಕತೆ ಆರಂಭಿಸಿದ್ದು, ಆತನ ಮನವೊಲಿಕೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದು ಸೂಚನೆ ಬರುವವರೆಗೂ ಬೆದರಿಕೆ ಪ್ರದೇಶವನ್ನು ನಿರ್ಲಕ್ಷಿಸುವಂತೆ ನಾಗರಿಕರ ಬಳಿ ಪೊಲೀಸ್ ಇಲಾಖೆ ಮನವಿ ಮಾಡಿದೆ. ಟುಪೆಲೋ ಪೊಲೀಸ್ ಇಲಾಖೆ ಜನರನ್ನು ಚದುರಿಸಲು ಕೇಳಿದ್ದು, ಎಲ್ಲಾ ತುರ್ತು ಸೇವೆಗಳನ್ನು ಅಲರ್ಟ್ ಮಾಡಲಾಗಿದೆ ಎಂದು ಹೇಳಿದೆ. ಸದ್ಯ ಸ್ಥಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಎರಡು ಇಂಜಿನ್ ಸಾಮರ್ಥ್ಯದ 9 ಆಸನ ವ್ಯವಸ್ಥೆ ಇರುವ ಬೀಚ್ಕ್ರಾಫ್ಟ್ ಕಿಂಗ್ ಏರ್ 90 ಹೆಸರಿನ ಸಣ್ಣ ವಿಮಾನವನ್ನು ತೆಗೆದುಕೊಂಡು ಹೋಗಿರುವ ಪೈಲಟ್, ಆಗಸದಲ್ಲೇ ಒಂದು ಗಂಟೆಗೂ ಅಧಿಕ ಸಮಯದಿಂದ ಗಿರಕಿ ಹೊಡೆಯುತ್ತಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಮೂಡಿದೆ. ರಾಜ್ಯದ ಕಾನೂನು ಜಾರಿ ನಿರ್ದೇಶನಾಲಯ ಮತ್ತು ತುರ್ತು ಇಲಾಖೆ ಬಹಳ ಹತ್ತಿರದಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. (ಏಜೆನ್ಸೀಸ್)