

ಗಜಪತಿ: ಒಡಿಶಾದ ಪರಲಖೆಮುಂಡಿಯ ಅರಣ್ಯ ಸಹಾಯಕ ಸಂರಕ್ಷಕ (ಎಸಿಎಫ್) ಅಧಿಕಾರಿ ಸೌಮ್ಯ ರಂಜನ್ ಮೊಹಪಾತ್ರ ನಿಗೂಢ ಸಾವು ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆಯುತ್ತಿದ್ದು, ಒಡಿಶಾದ ಅಪರಾಧ ವಿಭಾಗದ ಪೊಲೀಸರು ಸೌಮ್ಯ ರಂಜನ್ ಪತ್ನಿ ಬಿದ್ಯಾಭಾರತಿ ಪಾಂಡಾಳನ್ನು ಪಾಲಿಗ್ರಾಫ್ (ಸುಳ್ಳು ಪತ್ತೆ) ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.
ಬಿದ್ಯಾಭಾರತಿಯನ್ನು ಸುಳ್ಳು ಪತ್ತೆ ಪರೀಕ್ಷೆ ಗುರಿಯಾಗಿಸಲು ಒಡಿಶಾ ರಾಜಧಾನಿ ಭುವನೇಶ್ವರಕ್ಕೆ ಕರೆತರುವ ಸಾಧ್ಯತೆ ಇದೆ. ಈ ಪ್ರಕರಣದ ಪ್ರಮುಖ ಆರೋಪಿ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್ಒ) ಸಂಗ್ರಾಮ್ ಕೇಸರಿ ಬೆಹೆರಾ ಮತ್ತು ಅಡುಗೆ ಕೆಲಸಗಾರ ಮನ್ಮಥ್ ಕುಂಭ ಎಂಬುವವರಿಗೆ ಶನಿವಾರ (ಸೆ. 18) ಪಾಲಿಗ್ರಾಫ್ ಟೆಸ್ಟ್ ಮಾಡಲಾಗಿದೆ.
ಡಿಎಫ್ಒಗೆ ಸುಮಾರು 3 ಗಂಟೆಗಳ ಕಾಲ ಭುವನೇಶ್ವರದ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ. ಎಸಿಎಫ್ ಸೌಮ್ಯ ರಂಜನ್ ಸಾವಿಗೆ ಕಾರಣ ತಿಳಿಯಲು ಟೆಸ್ಟ್ ವೇಳೆ ಡಿಎಫ್ಒಗೆ ಸುಮಾರು 100 ಪ್ರಶ್ನೆಗಳನ್ನು ಕೇಳಲಾಗಿದೆ.
ಸೌಮ್ಯ ರಂಜನ್ ಕುಟುಂಬ ಬಿದ್ಯಾಭಾರತಿಯ ಹೆಸರನ್ನು ಉಲ್ಲೇಖಿಸಿದ್ದು, ಮಗನ ಸಾವಿನ ಹಿಂದೆ ಪತ್ನಿ ಬಿದ್ಯಾಭಾರತಿ ಕೈವಾಡ ಇದೆ. ಮಗನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಬಿದ್ಯಾಭಾರತಿಗು ಮತ್ತು ಡಿಎಫ್ಒ ಸಂಗ್ರಾಮ್ ಕೇಸರಿಗೂ ಅನೈತಿಕ ಸಂಬಂಧ ಇತ್ತೆಂದು ಸೌಮ್ಯ ರಂಜನ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೀಗಾಗಿ ಪೊಲೀಸ್ ಎಫ್ಐಆರ್ನಲ್ಲಿ ಬಿದ್ಯಾಭಾರತಿ ಹೆಸರನ್ನು ಸಹ ಸೇರಿಸಲಾಗಿದೆ.
ಈ ಪ್ರಕರಣದಲ್ಲಿ ಸೌಮ್ಯ ರಂಜನ್ ಪತ್ನಿ ಬಿದ್ಯಾಭಾರತಿ, ಗಜಪತಿ ಡಿಎಫ್ಒ ಸಂಗ್ರಾಮ್ ಕೇಸರಿ ಮತ್ತು ಅಡುಗೆಭಟ್ಟ ಸೇರಿದಂತೆ ಒಟ್ಟು 6 ಮಂದಿಯನ್ನು ಈಗಾಗಲೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದುವರೆಗೂ 25 ಮಂದಿ ಹೇಳಿಕೆಯನ್ನು ದಾಖಲಿಸಲಾಗಿದೆ. ಆದರೆ, ಇದುವರೆಗೂ ಸೌಮ್ಯ ರಂಜನ್ ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಇನ್ನು ವಿಚಾರಣೆ ನಡುವೆಯೇ ಪರಲಖೆಮುಂಡಿಯ ಪೊಲೀಸ್ ಗಜಪತಿ ಡಿಎಫ್ಒ ಸಂಗ್ರಾಮ್ ಕೇಸರಿಗೆ ಈ ಪ್ರಕರಣದಲ್ಲಿ ಕ್ಲೀನ್ಚಿಟ್ ನೀಡಿದ್ದಾರೆ. ಕರೆ ವಿವರಣೆಯನ್ನು ವಿಶ್ಲೇಷಿಸಿದರೆ ಈ ಪ್ರಕರಣಕ್ಕೂಮ ಡಿಎಫ್ಒಗೂ ಸಂಬಂಧ ಇಲ್ಲ ಎಂಬುದು ತಿಳಿದುಬರುತ್ತದೆ ಎಂದು ಗಜಪತಿ ಎಸ್ಪಿ ತಪಾನ್ ಕುಮಾರ್ ಪಾಟ್ನಾಯಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೂ, ಪೊಲೀಸರು ಕ್ಲೀನ್ ಚಿಟ್ ನೀಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಸೌಮ್ಯ ರಂಜನ್ ಕುಟುಂಬ ಬಲವಾದ ಆರೋಪ ಮಾಡಿದ್ದು, ಡಿಎಫ್ಒ ಮತ್ತು ಬಿದ್ಯಾಭಾರತಿ ನಡುವೆ ಅನೈತಿಕ ಸಂಬಂಧ ಇತ್ತು. ಇದರಿಂದಲೇ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿತ್ತು. ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದು, ಎಫ್ಐಆರ್ನಲ್ಲಿ ಡಿಎಫ್ಒ ಮತ್ತು ಬಿದ್ಯಾಭಾರತಿಯನ್ನು ಪ್ರಮುಖ ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ.
ಅಂದಹಾಗೆ ಎಸಿಎಫ್ ಸೌಮ್ಯ ರಂಜನ್ ಅವರು ಜುಲೈ 11ರಂದು ಪರಲಖೆಮುಂಡಿಯ ತಮ್ಮ ಕ್ವಾಟ್ರಸ್ನಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಕೂಡ ಆಸ್ಪತ್ರೆಗೆ ದಾಖಲಿಸಿದ ದಿನದ ಬೆನ್ನಲ್ಲೇ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. (ಏಜೆನ್ಸೀಸ್)