

ನವದೆಹಲಿ: ಇದು ಪರೀಕ್ಷೆಯ ಸಮಯ ಆಗಿರುವುದರಿಂದ ಪರೀಕ್ಷಾರ್ಥಿಗಳಷ್ಟೇ ಅಲ್ಲದೆ ಅವರ ಪಾಲಕರು ಮತ್ತು ಶಿಕ್ಷಕರು ಕೂಡ ಪರೀಕ್ಷೆ ಕುರಿತ ಒತ್ತಡದಲ್ಲಿರುವುದು ಸಹಜ. ಅಂಥವರಿಗೆಂದೇ ಪ್ರತಿ ವರ್ಷದಂತೆ ಈ ವರ್ಷವು ಕೇಂದ್ರ ಸರ್ಕಾರ ಪರೀಕ್ಷಾ ಪೇ ಚರ್ಚಾ 2022 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮ ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಆರಂಭವಾಗಿದೆ.
ಪ್ರಧಾನಿ ಮೋದಿ ಅವರು ಭಾರತದಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಪೂರ್ವ ಪರೀಕ್ಷೆಯ ವಿಷಯಗಳಾದ ತಯಾರಿ ವಿಧಾನಗಳು, ಒತ್ತಡವನ್ನು ನಿರ್ವಹಿಸುವುದು ಇತ್ಯಾದಿಗಳ ಕುರಿತು ಸಂವಾದ ನಡೆಸುತ್ತಿದ್ದಾರೆ. ಕ್ರಾರ್ಯಕ್ರಮದ ನೇರ ಪ್ರಸಾರವನ್ನು ಪ್ರಧಾನಿ ಮೋದಿ ಅವರ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಬಹುದಾಗಿದೆ.
ಪಿಎಂ ಮೋದಿಯವರ ಪರೀಕ್ಷಾ ಪೇ ಚರ್ಚಾ ಸಂವಾದದ ಐದನೇ ಆವೃತ್ತಿಯ ಘೋಷವಾಕ್ಯವೆಂದರೆ 'ಪರೀಕ್ಷಾ ಕಿ ಬಾತ್, ಪಿಎಂ ಕೆ ಸಾಥ್' ಎಂಬುದು. ಶಿಕ್ಷಣ ಸಚಿವಾಲಯದ ಪ್ರಕಾರ ಪರೀಕ್ಷಾ ಪೇ ಚರ್ಚಾ ಒಂದು ದೊಡ್ಡ ಆಂದೋಲನದ ಭಾಗವಾಗಿದೆ. ಪರೀಕ್ಷೆಗಳು ಬಂದಾಗ ಮಕ್ಕಳಿಗೆ ಒತ್ತಡ-ಮುಕ್ತ ವಾತಾವರಣವನ್ನು ಸೃಷ್ಟಿಸಲು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಒಟ್ಟುಗೂಡಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.