

ಇಸ್ಲಮಾಬಾದ್: ಕ್ರೌರ್ಯವನ್ನೇ ಕೇಂದ್ರವಾಗಿರಿಸಿಕೊಂಡು ಸೃಷ್ಟಿಸಿರುವ ಪಬ್ಜಿಯಂತಹ ಆನ್ಲೈನ್ ಗೇಮ್ಗಳಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ. ಪಾಕಿಸ್ತಾನದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಭಾರತ ಸರ್ಕಾರದಂತೆ ಪಾಕ್ನಲ್ಲಿಯು ಪಬ್ಜಿ ನಿಷೇಧಿಸುವಂತೆ ಅಲ್ಲಿನ ಜನರು ಮತ್ತು ಪೊಲೀಸರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಪಬ್ಜಿ ಬ್ಯಾನ್ ಮಾಡುವಂತೆ ಒತ್ತಾಯಿಸಲು ಈ ಭೀಕರ ಘಟನೆಯೇ ಕಾರಣ. ಪಬ್ಜಿಗೆ ದಾಸನಾಗಿದ್ದ 14 ವರ್ಷದ ಬಾಲಕನೊಬ್ಬ ಕೆಲ ದಿನಗಳ ಹಿಂದೆ ತಾಯಿ ಮತ್ತು ಇಬ್ಬರು ಅಪ್ರಾಪ್ತ ಸಹೋದರಿಯರು ಸೇರಿದಂತೆ ತನ್ನ ಇಡೀ ಕುಟುಂಬವನ್ನು ಗುಂಡಿಕ್ಕಿ ಕೊಂದಿದ್ದಾನೆ. ಈ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಳೆದ ಶುಕ್ರವಾರ ನಡೆದಿದೆ.
ಆರೋಗ್ಯ ಕಾರ್ಯಕರ್ತೆಯಾಗಿರುವ ನಹೀದ್ ಮುಬಾರಕ್ (45) ತನ್ನ 22 ವರ್ಷದ ಮಗ ತೈಮೂರ್ ಮತ್ತು 17 ಮತ್ತು 11 ವರ್ಷದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಭೀಕರ ಹತ್ಯೆಯಾಗಿರುವ ಸ್ಥಿತಿಯಲ್ಲಿ ಕಳೆದ ವಾರ ಲಾಹೋರ್ ಕಹ್ನಾ ಏರಿಯಾದಲ್ಲಿ ಪತ್ತೆಯಾಗಿದ್ದರು. ಆದರೆ, ಆಕೆಯ ಅಪ್ರಾಪ್ತ ಮಗನಿಗೆ ಯಾವುದೇ ಗಾಯಗಳಾಗದಂತೆ ಉಳಿದುಕೊಂಡಿದ್ದ. ಇಡೀ ಕುಟುಂಬದಲ್ಲಿ ಆತನೊಬ್ಬನೆ ಬದುಕುಳಿದಿದ್ದ. ಆದರೆ, ಇಡೀ ಕುಟುಂಬ ಭೀಕರವಾಗಿ ಕೊಲೆಯಾಗಿತ್ತು.
ಪಬ್ಜಿಗೆ ದಾಸನಾಗಿದ್ದ ಬಾಲಕ ತನ್ನ ತಾಯಿ, ಸಹೋದರ ಮತ್ತು ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೆಚ್ಚು ಕಾಲ ಪಬ್ಜಿಯಲ್ಲೇ ಮುಳುಗಿರುತ್ತಿದ್ದರಿಂದ ಆತನಲ್ಲಿ ಕೆಲ ಮಾನಸಿಕ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ಆಗಿ ಡಿವೋರ್ಸ್ ಆಗಿದ್ದ ನಾಹೀದ್, ತನ್ನ ಮಕ್ಕಳ ಜತೆ ವಾಸವಿದ್ದಳು. ಪಬ್ಜಿಗೆ ದಾಸನಾಗಿದ್ದ ಮಗನಿಗೆ ಅದನ್ನು ಬಿಟ್ಟು ಓದಿನ ಕಡೆ ಗಮನಹರಿಸು ಎಂದು ಯಾವಾಗಲೂ ಬುದ್ಧಿ ಮಾತು ಹೇಳುತ್ತಿದ್ದರು. ಒಂದು ದಿನ ಸಿಕ್ಕಾಪಟ್ಟೆ ಬೈದಾಗ ಕುಪಿತಗೊಂಡ ಬಾಲಕ ಮನೆಯಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಮಲಗಿದ್ದ ತಾಯಿ, ಅಣ್ಣ ಮತ್ತು ಸಹೋದರಿಯರನ್ನು ಕೊಲೆ ಮಾಡಿದ್ದಾನೆ.
ಮರುದಿನ ಬೆಳಗ್ಗೆ, ಬಾಲಕ ನೆರೆಹೊರೆಯವರನ್ನು ಕರೆದು ಕೊಲೆಯಾಗಿರುವುದನ್ನು ತಿಳಿಸುತ್ತಾನೆಯೇ ಹೊರತು ತಾನು ಒಪ್ಪಿಕೊಳ್ಳುವುದಿಲ್ಲ. ಬಳಿಕ ನೆರೆಹೊರೆಯವರು ಪೊಲೀಸರನ್ನು ಕರೆದರು. ಆ ಸಮಯದಲ್ಲಿ ಹುಡುಗ ತಾನು ಮನೆಯ ಮೇಲಿನ ಮಹಡಿಯಲ್ಲಿದ್ದೆ ಮತ್ತು ಅವನ ಕುಟುಂಬವು ಹೇಗೆ ಕೊಲ್ಲಲ್ಪಟ್ಟಿದೆ ಎಂದು ತಿಳಿದಿಲ್ಲ ಎಂದು ಪೊಲೀಸರಿಗೆ ತಿಳಿಸಿದನು.
ಇತ್ತ ಪರವಾನಗಿ ಪಡೆದ ಪಿಸ್ತೂಲ್ ಅನ್ನು ನಾಹೀದ್ ತನ್ನ ಕುಟುಂಬದ ರಕ್ಷಣೆಗಾಗಿ ಇಟ್ಟುಕೊಳ್ಳಲಾಗಿತ್ತು. ಬಾಲಕ ಪಿಸ್ತೂಲ್ ಅನ್ನು ಚರಂಡಿಗೆ ಎಸೆದಿದ್ದ. ಸಾಕಷ್ಟು ತನಿಖೆಯ ಬಳಿಕ ಬಾಲಕನೇ ಕೊಂದಿರುವುದು ಪೊಲೀಸರಿಗೆ ತಿಳಿದಿದೆ. ಆ ಹುಡುಗನನ್ನು ವಿಚಾರಣೆಗೆ ಒಳಪಡಿಸಿದಾಗ, ಪಬ್ಜಿ ಆಟ ತನಗೆ ಹಿಂಸೆ ಮಾಡಲು ಪ್ರಚೋದನೆ ನೀಡಿತು ಎಂದು ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಆಟದಲ್ಲಿ ಇರುವಂತೆ, ತನ್ನ ಕುಟುಂಬದ ಸದಸ್ಯರು ಕೂಡ ಬದುಕಿ ಬರುತ್ತಾರೆ ಎಂದು ಭಾವಿಸಿದ್ದನಂತೆ.
ಸದ್ಯ ಈ ಪ್ರಕರಣ ಪಾಕ್ ಜನರ ನಿದ್ದೆಗೆಡಿಸಿದ್ದು, ಭಾರತದಲ್ಲಿ ಬ್ಯಾನ್ ಮಾಡಿರುವಂತೆಯೇ ಪಾಕ್ನಲ್ಲೂ ಪಬ್ಜಿ ಆನ್ಲೈನ್ ಗೇಮ್ ಅನ್ನು ನಿಷೇಧಿಸಿ ಎಂದು ಸರ್ಕಾರವನ್ನು ಪಟ್ಟುಹಿಡಿದಿದ್ದಾರೆ. ಪೊಲೀಸ್ ಅಧಿಕಾರಿಗಳು ಕೂಡ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಆದರೆ, ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಡಾನ್ ಪತ್ರಿಕೆಯ ವರದಿಯ ಪ್ರಕಾರ, ಲಾಹೋರ್ನಲ್ಲಿ ಆನ್ಲೈನ್ ಆಟಕ್ಕೆ ಸಂಬಂಧಿಸಿದಂತೆ ಇದು ನಾಲ್ಕನೇ ಅಪರಾಧವಾಗಿದೆ. 2020 ರಲ್ಲಿ ಮೊದಲ ಪ್ರಕರಣ ಕಾಣಿಸಿಕೊಂಡಾಗ, ಅಂದಿನ ನಗರ ಪೊಲೀಸ್ ಅಧಿಕಾರಿ ಜುಲ್ಫಿಕರ್ ಹಮೀದ್ ಅವರು ಲಕ್ಷಾಂತರ ಹದಿಹರೆಯದವರ ಜೀವ, ಸಮಯ ಮತ್ತು ಭವಿಷ್ಯವನ್ನು ಉಳಿಸಲು ಆಟವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಪಬ್ಜಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ?
ಮಕ್ಕಳ ಮಾನಸಿಕ ಸ್ಥಿತಿಯನ್ನೇ ಕದಡುವ ಈ ಪಬ್ಜಿ ವಿಶ್ವದ ಅಪಾಯಕಾರಿ ಗೇಮ್ಗಳಲ್ಲಿ ಒಂದು. ಇದನ್ನು ಹಿಂಸೆಯ ಪ್ರಚೋದಕ ಎಂದು ಪರಿಗಣಿಸಿ ಅನೇಕ ರಾಷ್ಟ್ರಗಳು ಬ್ಯಾನ್ ಮಾಡಿವೆ. ಭಾರತ ಕೂಡ ಇದರಿಂದ ಹೊರತಾಗಿಲ್ಲ. ಹೀಗಿದ್ದರೂ ಕೆಲವು ಲೋಪದೋಷಗಳಿಂದ ಭಾರತದಲ್ಲಿ ಪಬ್ ಜಿ ಚಾಲ್ತಿಯಲ್ಲಿದೆ. ಇಂತಹ ಅಪಾಯಕಾರಿ ಗೇಮ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಏನು ಹೇಳಿದೆ ಅಂದರೆ, 2018ರಲ್ಲಿ ಆನ್ಲೈನ್ ಗೇಮಿಂಗ್ ಚಟವನ್ನು ಡಬ್ಲ್ಯುಎಚ್ಒ ಮಾನಸಿಕ ಅಸ್ವಸ್ಥತೆ ಎಂದು ತೀರ್ಮಾನಿಸಿದೆ. ಇಂತಹ ಗೇಮ್ಗಳು ಅನೇಕ ಜನರಲ್ಲಿ ಖಿನ್ನತೆಗೆ ಕಾರಣವೆಂದು ಹೇಳಿದೆ. ಪಬ್ಜಿ ವ್ಯಸನಿಯಾಗಿರುವ ಜನರು ಕಡಿಮೆ ಸಾಮಾಜಿಕ ಸಂವಹನದಿಂದಾಗಿ ಸುಲಭವಾಗಿ ಒತ್ತಡಕ್ಕೆ ಒಳಗಾಗಬಹುದು ಅಥವಾ ಸಾರ್ವಜನಿಕವಾಗಿ ಆತಂಕದ ಸಮಸ್ಯೆಗಳನ್ನು ಎದುರಿಸಬಹುದು ಎಂದಿದೆ. (ಏಜೆನ್ಸೀಸ್)