

ನವದೆಹಲಿ: ಬರೋಬ್ಬರಿ 400 ಕೋಟಿ ರೂ. ಮೌಲ್ಯದ 77 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ಪಾಕಿಸ್ತಾನ ಮೂಲದ ಮೀನುಗಾರರ ದೋಣಿ ಹಾಗೂ ಅದರಲ್ಲಿದ್ದ ಆರು ಮಂದಿಯನ್ನು ಗುಜರಾತಿನ ಕರಾವಳಿ ಪ್ರದೇಶದಲ್ಲಿ ವಶಕ್ಕೆ ಪಡೆದಿರುವುದಾಗಿ ಕರಾವಳಿ ಪಡೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾರತೀಯ ಕರಾವಳಿ ಪಡೆ ಮತ್ತು ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಭಾನುವಾರ ಮಧ್ಯರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿತು. ಈ ವೇಳೆ ಗುಜರಾತಿನ ಕಚ್ ಜಿಲ್ಲೆಯ ಜಕಾಹು ಕರಾವಳಿಯಿಂದ 35 ನಾಟಿಕಲ್ ಮೈಲಿ ದೂರದಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಅಲ್ ಹುಸೇನಿ ಹೆಸರಿನ ಪಾಕಿಸ್ತಾನ ಮೂಲದ ದೋಣಿ ಮತ್ತು ಅದರಲ್ಲಿದ್ದ ಆರು ಸಿಬ್ಬಂದಿಯನ್ನು ಹಾಗೂ 400 ಕೋಟಿ ರೂ. ಮೌಲ್ಯದ 77 ಕೆಜಿ ಹೆರಾಯಿನ್ ಅನ್ನು ವಶಕ್ಕೆ ಪಡೆಯಲಾಗಿದೆ. ಪಾಕ್ ದೋಣಿಯು ಭಾರತದ ಜಲಗಡಿ ವ್ಯಾಪ್ತಿಯಲ್ಲಿ ಇದ್ದಿದ್ದರಿಂದ ವಶಕ್ಕೆ ಪಡೆಯಲಾಗಿದೆ ಎಂದು ಗುಜರಾತಿನ ರಕ್ಷಣಾ ಪಿಆರ್ಒ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ವಶಕ್ಕೆ ಪಡೆದ ನಂತರ ದೋಣಿಯನ್ನು ಜಕಾಹು ಕರಾವಳಿ ಪ್ರದೇಶಕ್ಕೆ ಹೆಚ್ಚಿನ ತನಿಖೆಗಾಗಿ ತರಲಾಗಿದೆ. ಕರಾಚಿ ಬಂದರನ್ನು ಬಿಟ್ಟ ಪಾಕ್ ದೋಣಿ ತನ್ನ ಕಾರ್ಯಸಾಧನೆಗೆ ಅತಿ ಹೆಚ್ಚಿನ ಆವರ್ತನ (VHF)ವುಳ್ಳ ರೇಡಿಯೋ ಚಾನೆಲ್ ಮತ್ತು ಹರಿ 1 ಮತ್ತು ಹರಿ 2 ಎಂಬ ಕೋಡ್ ವರ್ಡ್ ಮೂಲಕ ಡ್ರಗ್ಸ್ ಅನ್ನು ಡೆಲಿವರಿ ಮಾಡುವ ಪ್ರಯತ್ನಕ್ಕೆ ಮುಂದಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ಕಡಲ ಗಡಿಯನ್ನು ದಾಟಿ ಜಕಾಹು ಕರಾವಳಿಯಿಂದ 35 ನಾಟಿಕಲ್ ಮೈಲಿ ದೂರದಲ್ಲಿದೆ ಎಂಬ ಮಾಹಿತಿ ಮೇರೆಗೆ ಕರಾವಳಿ ಪಡೆ ಮತ್ತು ಎಟಿಎಸ್ ಜಂಟಿ ಕಾರ್ಯಾಚರಣೆ ನಡೆಸಿ ಡ್ರಗ್ಸ್, ದೋಣಿ ಮತ್ತು ಪಾಕ್ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಪಾಕಿಸ್ತಾನದ ಸ್ಮಗ್ಲರ್ಗಳಾದ ಹಜಿ ಹಸನ್ ಮತ್ತು ಹಜಿ ಹಸಮ್ ಎಂಬುವರು ಪಂಜಾಬ್ನ ಭೂಗತ ಜಗತ್ತಿನ ಸಂಪರ್ಕ ಇರುವವರಿಗೆ ಡ್ರಗ್ಸ್ ಡೆಲಿವರಿ ಮಾಡುತ್ತಿದ್ದ ಎಂದು ವಶಕ್ಕೆ ಪಡೆದಿರುವ ಪಾಕಿಸ್ತಾನಿ ಪ್ರಜೆಗಳು ಬಾಯ್ಬಿಟ್ಟಿದ್ದಾರೆ. ಡ್ರಗ್ಸ್ ಅನ್ನು ಗುಜರಾತ್ ಕರಾವಳಿಯ ಕಚ್ನಲ್ಲಿ ಎಲ್ಲೋ ಆಫ್ಲೋಡ್ ಮಾಡಬೇಕಾಗಿತ್ತು ಎಂದಿದ್ದಾರೆ. (ಏಜೆನ್ಸೀಸ್)