VIDEO| ಪೊಲೀಸ್​ ಠಾಣೆಗೆ ನುಗ್ಗಿ ಪೇದೆಗೆ ಥಳಿಸಿದ ಗುಂಪು: ವಿಡಿಯೋ ಮಾಡುವುದರಲ್ಲಿ ಬಿಜಿಯಾದ ಜನರು!

Police Attack
Published on

ನವದೆಹಲಿ: ಆತಂಕಕಾರಿ ಘಟನೆಯೊಂದರಲ್ಲಿ ವ್ಯಕ್ತಿಗಳ ಗುಂಪೊಂದು ಪೊಲೀಸ್​ ಠಾಣೆ ಒಳಗೆ ನುಗ್ಗಿ ಸಿಬ್ಬಂದಿಯೊಬ್ಬರಿಗೆ ಥಳಿಸಿದ್ದಾರೆ. ಈ ಘಟನೆ ದೆಹಲಿಯ ಆನಂದ್​ ವಿಹಾರ ಪೊಲೀಸ್​ ಠಾಣೆಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪೊಲೀಸ್​ ಪೇದೆಯನ್ನು ಸುತ್ತುವರಿದಿರುವ ದುಷ್ಕರ್ಮಿಗಳ ಗುಂಪು ಪೇದೆಯನ್ನು ಥಳಿಸುತ್ತಿರುವುದು ವಿಡಿಯೋದಲ್ಲಿದೆ. ಇದೇ ವೇಳೆ ಪಕ್ಕದಲ್ಲೇ ಇರುವ ಜನರು ವಿಡಿಯೋ ಮತ್ತು ಫೋಟೋ ತೆಗೆಯುವುದರಲ್ಲಿ ಬಿಜಿಯಾಗಿದ್ದು, ಯಾರೊಬ್ಬರು ಕೂಡ ಪೇದೆಯನ್ನು ಬಿಡಿಸಬೇಕೆಂಬ ಗೋಜಿಗೆ ಹೋಗೇ ಇಲ್ಲ.

ದಾಳಿಕೋರರು ಯಾರು?

ದಾಳಿ ಮಾಡಿದ ಗುಂಪಿನ ಪ್ರಮುಖ ಆರೋಪಿಯನ್ನು ಸತೀಶ್​ ಚೌಧರಿ​ (29) ಎಂದು ಗುರುತಿಸಲಾಗಿದೆ. ಈತ ಕರ್ಕರ್ದೂಮ ಗ್ರಾಮದ ನಿವಾಸಿ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ.

ನಡೆದಿದ್ದೇನು?

ಕರ್ಕರ್ದೂಮ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿ ಆಕೆ ಚಿನ್ನದ ಸರವನ್ನು ಮರಿದು ಹಾಕಿದ್ದಾರೆ ಎಂದು ಜುಲೈ 30ರ ರಾತ್ರಿ 11.27ಕ್ಕೆ ಪೊಲೀಸರಿಗೆ ಮಾಹಿತಿ ಸಿಗುತ್ತದೆ. ಈ ಸಮಸ್ಯೆ ಗ್ರಾಮದ ಅಂಚಲ್​ ಬಕ್ಸಿ ಮತ್ತ ಅಜಯ್​ಗೆ ಸಂಬಂಧಿಸಿದ್ದಾಗಿರುತ್ತದೆ. ಸ್ಥಳಕ್ಕೆ ತೆರಳುವ ಪೊಲೀಸರು ಪಾನಮತ್ತನಾಗಿದ್ದ ಅಜಯ್​ ಎಂಬಾತನನ್ನು ಪೊಲೀಸ್​ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಾರೆ. ಈ ವೇಳೆ ಅಜಯ್​ ಸಹೋದರ ಸತೀಶ್ ಚೌಧರಿ ಮತ್ತು ಇತರರು ಪೊಲೀಸ್​ ಠಾಣೆಗೆ ಆಗಮಿಸಿ, ಕರ್ತವ್ಯ ನಿರತ ಪೊಲೀಸ್​ ಪೇದೆಯನ್ನು ಪ್ರಚೋದಿಸಲು ಯತ್ನಿಸುತ್ತಾರೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಬರುವ ಕಾನ್ಸ್​ಟೇಬಲ್​ ಪ್ರಕಾಶ್​ ಅವರನ್ನು ಸುತ್ತುವರಿಯುವ ಸತೀಶ್​ ಮತ್ತು ಆತನ ಸಹಚರರು ಪೇದೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದ ಉಪ ಪೊಲೀಸ್​ ಆಯುಕ್ತ (ಶಹ್ದಾರಾ) ಆರ್​ ಸತ್ಯಸುಂದರಂ ಮಾಹಿತಿ ನೀಡಿದರು.​

ಗಾಯಗೊಂಡ ಪೊಲೀಸರಿಗೆ ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸತ್ಯಸುಂದರಂ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net