

ಕೊಲಂಬೋ: ಭಾರತದ ನೆರೆಯ ಪುಟ್ಟ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ನಿಯಂತ್ರಣವನ್ನು ತಪ್ಪಿದೆ. ಥಾಮಸ್ ಹೆಸರಿನ 69 ವರ್ಷದ ವ್ಯಕ್ತಿ ಇಂಡಿಯಾ ಟುಡೆಗೆ ಲಂಕಾ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದು, ಅಲ್ಲಿನ ಜನರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
ಪೆಟ್ರೋಲ್ ಲಭ್ಯವಾಗುತ್ತಿಲ್ಲ. ಮೆಡಿಶಿನ್ ಪಡೆಯುವುದು ಕಷ್ಟಕರವಾಗಿದೆ. ಅಗತ್ಯ ಪದಾರ್ಥಗಳ ಬೆಲೆ ಗಗನಕ್ಕೇರಿವೆ. ಸದ್ಯದ ಕ್ಷಣದಲ್ಲಿ ನಮಗೆ ಯಾವುದೇ ಗ್ಯಾಸ್ ಸೌಲಭ್ಯ ಸಿಕ್ಕಿಲ್ಲ. ಮೆಡಿಶಿನ್ ಇಲ್ಲ. ನನ್ನ ವಯಸ್ಸು 69 ಆದರೆ, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಘಟನೆಯನ್ನು ನಾನು ನೋಡಿದೆ ಎಂದು ಥಾಮಸ್ ಹೇಳಿದರು.
ನಮಗೆ ಇಲ್ಲಿನ ಪರಿಸ್ಥಿತಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಣ ಮತ್ತು ಸಂಬಳವಿಲ್ಲ. ನಮ್ಮ ಬಳಿ ಹಣವಿದ್ದರೆ, ಸರಕುಗಳಿಲ್ಲ. ನಾವು ಕೊಲಂಬೋದ ಕೆಲವು ಅಂಗಡಿಗಳಿಗೆ ಹೋದಾಗ ಅವರು ಬೇಳೆ ಇಲ್ಲ, ಅಕ್ಕಿ ಇಲ್ಲ, ಬ್ರೆಡ್ ಇಲ್ಲ ಎಂದು ಹೇಳುತ್ತಾರೆ ಅಥವಾ ಒಂದು ಪೌಂಡ್ ಬ್ರೆಡ್‌ನ ಬೆಲೆ ಶ್ರೀಲಂಕಾದ 100 ರೂಪಾಯಿಗಳು ಎನ್ನುತ್ತಿದ್ದಾರೆ. ಒಂದು ಕಪ್ ಚಹಾದ ಬೆಲೆ 100 ರೂಪಾಯಿ ಅಗಿದೆ. ಪ್ರಮುಖ ವಸ್ತುಗಳ ಬೆಲೆಗಳನ್ನು ಕೇಳತೀರದ್ದಾಗಿದೆ. ಇದಲ್ಲದೆ, ಶ್ರೀಲಂಕಾದಲ್ಲಿ ದೀರ್ಘಾವಧಿಯ ವಿದ್ಯುತ್ ಕಡಿತವು ದೇಶದ ಸಂವಹನ ಜಾಲಗಳ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ಬೃಹತ್ ಸಾಲದ ಬಾಧ್ಯತೆಗಳು ಮತ್ತು ಕ್ಷೀಣಿಸುತ್ತಿರುವ ವಿದೇಶಿ ಮೀಸಲುಗಳೊಂದಿಗೆ ಶ್ರೀಲಂಕಾವು ತನ್ನ ಆಮದುಗಳಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಇಂಧನ ಸೇರಿದಂತೆ ಹಲವಾರು ಸರಕುಗಳ ಕೊರತೆಗೆ ಇದು ಕಾರಣವಾಗಿದೆ. ಅಲ್ಲದೆ, ಕೋವಿಡ್ -19 ಸಾಂಕ್ರಾಮಿಕವು ಶ್ರೀಲಂಕಾದ ಆರ್ಥಿಕತೆಗೆ ಭಾರೀ ಹೊಡೆತವನ್ನು ನೀಡಿದೆ. ಕಳೆದ ಎರಡು ವರ್ಷಗಳಲ್ಲಿ ಸರ್ಕಾರವು 14 ಬಿಲಿಯನ್ ಡಾಲರ್ ನಷ್ಟವನ್ನು ಅಂದಾಜಿಸಿದೆ.
ಇನ್ನು ಲಂಕಾದಲ್ಲಿ ಉದ್ಧವಿಸಿರುವ ಆರ್ಥಿಕ ಬಿಕ್ಕಟ್ಟನ್ನು ವಿರೋಧಿಸಿ ಶ್ರೀಲಂಕಾದ ಜನರು ಬೀದಿಗಿಳಿದಿದ್ದಾರೆ. ಶುಕ್ರವಾರ, ಕೋಪಗೊಂಡ ಪ್ರತಿಭಟನಾಕಾರರು ಅಧ್ಯಕ್ಷ ಗೊತಬಯ ರಾಜಪಕ್ಸೆ ಅವರ ಮನೆ ಬಳಿ ಪ್ರತಿಭಟನೆ ನಡೆಸಿದರು ಮತ್ತು ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿತು. ಬಳಿಕ ಎರಡು ಸೇನಾ ಬಸ್‌ಗಳಿಗೆ ಕಲ್ಲೆಸೆಯಲಾಯಿತು ಮತ್ತು ಒಂದಕ್ಕೆ ಬೆಂಕಿ ಹಚ್ಚಲಾಯಿತು. ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿ 54 ಜನರನ್ನು ಬಂಧಿಸಿದರು. ಇದರ ಬೆನ್ನಲ್ಲೇ ಲಂಕಾ ಅಧ್ಯಕ್ಷರು ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಎಲ್ಲ ಅಧಿಕಾರವನ್ನು ರಕ್ಷಣಾ ಪಡೆಗಳಿಗೆ ನೀಡಿದ್ದಾರೆ. ಏಪ್ರಿಲ್ 3 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. (ಏಜೆನ್ಸೀಸ್)