

ಚೆನ್ನೈ: ನಟ ಸಿದ್ಧಾರ್ಥ್ ಇತ್ತೀಚೆಗೆ ತನ್ನ ಸಿನಿಮಾಗಳಿಗಿಂತ ವಿವಾದದಿಂದಲೇ ತುಂಬಾ ಸುದ್ದಿಯಾಗುತ್ತಿದ್ದಾರೆ. ನಟಿ ಸಮಂತಾ ಡಿವೋರ್ಸ್ ವಿಚಾರದಲ್ಲಿ ಸಿದ್ಧಾರ್ಥ್ ಮಾಡಿದ್ದ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿ ಭಾರಿ ಚರ್ಚೆಯಾಗಿತ್ತು. ಅಲ್ಲದೆ, ಟ್ವಿಟರ್ ಟ್ರೆಂಡಿಂಗ್ ಕೂಡ ಆಗಿತ್ತು. ಇದಾದ ಬಳಿಕ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ನಕಲಿ ಎಂದಿದ್ದರು. ಇದು ಕೂಡ ವಿವಾದದ ಅಲೆ ಎಬ್ಬಿಸಿತ್ತು. ಇನ್ನು ಕೇಂದ್ರ ಸರ್ಕಾರದ ವಿರುದ್ಧ ಆಗಾಗ ಟೀಕೆ ಮಾಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ.
ಇದೀಗ ಸಿದ್ಧಾರ್ಥ್ ಟ್ವೀಟ್ ಪ್ರಹಾರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮೇಲೆ ನಡೆದಿದೆ. ಸಿದ್ಧಾರ್ಥ್ ಅವರ ಅಶ್ಲೀಲ ಮತ್ತು ಅವಹೇಳನಕಾರಿ ಟ್ವೀಟ್ಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೈನಾ ನೆಹ್ವಾಲ್ ವಿರುದ್ಧ ಟ್ವೀಟ್ ಮಾಡಿದ್ದ ಸಿದ್ಧಾರ್ಥ್, ಸೈನಾರನ್ನು ಸೂಕ್ಷ್ಮ ಕಾಕ್ ವಿಶ್ವ ಚಾಂಪಿಯನ್ ಎಂದು ಕುಹಕವಾಡಿದ್ದರು. ಇದಕ್ಕೂ ಮುನ್ನ ಸೈನಾ, ಪಂಜಾಬ್ ಭೇಟಿ ವೇಳೆ ಪ್ರಧಾನಿ ಮೋದಿ ಭದ್ರತಾ ವೈಫಲ್ಯದ ವಿರುದ್ಧ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಸಿದ್ಧಾರ್ಥ್, ಸೂಕ್ಷ್ಮ ಕಾಕ್ ಎಂದು ಕಾಲೆಳೆದಿದ್ದರು.
ಯಾವುದೇ ರಾಷ್ಟ್ರವು ತನ್ನ ಸ್ವಂತ ಪ್ರಧಾನಿಯ ಭದ್ರತೆಗೆ ರಾಜಿ ಮಾಡಿಕೊಂಡರೆ ತಾನು ಸುರಕ್ಷಿತ ಎಂದು ಹೇಳಿಕೊಳ್ಳುವುದಿಲ್ಲ. ಪ್ರಧಾನಿ ಮೋದಿಯವರ ಮೇಲೆ ಅರಾಜಕತಾವಾದಿಗಳು ನಡೆಸಿದ ಹೇಡಿತನದ ದಾಳಿಯನ್ನು ನಾನು ಪ್ರಬಲ ಪದಗಳಲ್ಲಿ ಖಂಡಿಸುತ್ತೇನೆಂದು ಸೈನಾ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ಧಾರ್ಥ, ಸೂಕ್ಷ್ಮ ಕಾಕ್ ವಿಶ್ವ ಚಾಂಪಿಯನ್... ದೇವರಿಗೆ ಧನ್ಯವಾದಗಳು ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ. ನಿಮಗೆ ನಾಚಿಕೆಯಾಗಬೇಕು #ರಿಹಾನ್ನಾ ಎಂದು ಟ್ವೀಟ್ ಮಾಡಿದ್ದರು.
ಮತ್ತೊಮ್ಮೆ ಟ್ವೀಟ್ ಮಾಡಿರುವ ಸಿದ್ಧಾರ್ಥ್, ಹುಂಜ ಮತ್ತು ಎತ್ತು ಅವು ಉಲ್ಲೇಖ ಮಾತ್ರ. ಅಗೌರವಯುತವಾದ ಯಾವುದನ್ನೂ ಉದ್ದೇಶಿಸಿಲ್ಲ, ಹೇಳಿಲ್ಲ ಅಥವಾ ಸೂಚಿಸಲಾಗಿಲ್ಲ ಎಂದು ಸಿದ್ಧಾರ್ಥ್ ಹೇಳಿದ್ದಾರೆ.
ಸಿದ್ಧಾರ್ಥ್ ಪೋಸ್ಟ್‌ಗೆ ನೆಟಿಜನ್ ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ಕಿರುಕುಳವನ್ನು ಉತ್ತೇಜಿಸುವ ರೀತಿಯ ಹಾಡಿನ ಭಾಗವಾಗಲು ಒಪ್ಪಿಕೊಂಡ ನಟನಿಂದ ಇನ್ನೇನು ನಿರೀಕ್ಷಿಸಬಹುದು? ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)