

ಭೋಪಾಲ್: ಗುಂಡಿನ ಮತ್ತೆ ಗಮ್ಮತ್ತು...ಅಳತೆ ಮೀರಿದರೆ ಆಪತ್ತು ಎನ್ನುವಂತೆ ದೆಹಲಿ ಮೂಲದ ಯುವತಿಯೊಬ್ಬಳು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ತೂರಾಡಿದ್ದಲ್ಲದೆ, ವಾಹನ ನಿಬಿಡ ರಸ್ತೆಯ ಮಧ್ಯೆಯೇ ಸೇನಾ ವಾಹನವನ್ನು ತಡೆದು ಅದನ್ನು ಜಖಂಗೊಳಿಸಲು ಪ್ರಯತ್ನಿಸಿ ಹೈಡ್ರಾಮ ಸೃಷ್ಟಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
22 ವರ್ಷದ ಯುವತಿ ಮಾಡೆಲ್ ಎಂದು ತಿಳಿದುಬಂದಿದೆ. ಆಕೆ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ಸೇನಾ ವಾಹನವನ್ನು ತಡೆದು ಅದಕ್ಕೆ ಒರಗಿಕೊಂಡು ಫೋನ್ನಲ್ಲಿ ಮಾತನಾಡುತ್ತಿರುತ್ತಾಳೆ. ಈ ವೇಳೆ ಎಷ್ಟೇ ಹಾರ್ನ್ ಮಾಡಿದರೂ ಆಕೆ ದಾರಿಯನ್ನು ಬಿಡುವುದಿಲ್ಲ. ಕಾರಿನ ಎದುರಿಗೆ ತಿರುಗಿ ಒಳಗೆ ಕುಳಿತಿದ್ದ ಯೋಧನನ್ನು ನಿಂದಿಸಲು ಶುರು ಮಾಡುತ್ತಾಳೆ. ಬಳಿಕ ಮಾತನಾಡುವುದನ್ನು ಮುಂದುವರಿಸುತ್ತಲೇ ಸೇನಾ ಕಾರಿಗೆ ಕಾಲಿನಿಂದ ಒದೆಯುತ್ತಾಳೆ. ಈ ವೇಳೆ ಅವಳ ಬ್ಯಾಗ್ನಿಂದ ಒಂದು ಮದ್ಯದ ಬಾಟಲ್ ರಸ್ತೆ ಬಿದ್ದು ಚೂರಾಗುತ್ತದೆ. ಅದನ್ನು ಗಮನಿಸಿದ ಮಾಡೆಲ್, ಕಾರು ಒದೆಯುವುದನ್ನು ಮುಂದುವರಿಸುತ್ತಾಳೆ. ಅದನ್ನು ನೋಡಿ ಕಾರಿನ ಒಳಗಿದ್ದ ಯೋಧ ಕೆಳಗಿಳಿದು ಬರುತ್ತಾರೆ. ಆದರೆ, ಅವರಿಗೂ ಕ್ಯಾರೆ ಎನ್ನದ ಯುವತಿ, ಯೋಧನನ್ನು ನೂಕುತ್ತಾಳೆ. ಕೊನೆಗೆ ದಾರಿ ಬಿಡುತ್ತಾಳೆ.
ಯುವತಿ ಹೈಡ್ರಾಮವನ್ನು ದಾರಿಹೋಕರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಯುವತಿಯನ್ನು ಘಟನಾ ನಂತರ ಸ್ಥಳೀಯ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಒಬ್ಬರು ಠಾಣೆಗೆ ಕರೆದೊಯ್ದರು ಎಂಬ ಮಾಹಿತಿ ಇದೆ. ಆಕೆ ಪಾನಮತ್ತಳಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದ್ದು, ಅಬಕಾರಿ ಕಾಯ್ದೆಯನ್ನು ಸೂಕ್ತ ಸೆಕ್ಷನ್ ಅಡಿಯಲ್ಲಿ ಆಕೆಯ ಮೇಲೆ ಪ್ರಕರಣ ದಾಖಲಿಸಿಲಾಗಿದೆ. ಇದಾದ ಬೆನ್ನಲ್ಲೇ ಜಾಮೀನಿನ ಮೇಲೆ ಆಕೆಯನ್ನು ಬಿಟ್ಟು ಕಳುಹಿಸಲಾಗಿದೆ.
ಯೋಧನಿಂದ ಇಲ್ಲಿಯವರೆಗೆ ಆಕೆಯ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಯುವತಿ ದೆಹಲಿ ಮೂಲದ ಮಾಡೆಲ್ ಆಗಿದ್ದು, ತನ್ನ ಇಬ್ಬರು ಫ್ರೆಂಡ್ಸ್ ಜತೆ ಗ್ವಾಲಿಯರ್ಗೆ ಭೇಟಿ ನೀಡಿದ್ದಳು. ಈ ಸಂದರ್ಭದಲ್ಲಿ ಈ ಹೈಡ್ರಾಮ ನಡೆದಿದೆ. (ಏಜೆನ್ಸೀಸ್)