

ವಿಜಯವಾಡ: ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಒಳಗೊಂಡಿರುವ ನಾಡು. ಅನೇಕ ವಿಚಿತ್ರ, ವಿಭಿನ್ನ ಹಾಗೂ ವಿನೂತನ ಪದ್ಧತಿಗಳನ್ನು ಆಧುನಿಕ ಕಾಲಘಟ್ಟದಲ್ಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಭಾರತದ ಪ್ರತಿಯೊಂದು ರಾಜ್ಯಗಳು ಕೂಡ ತನ್ನದೇಯಾದ ಆಚಾರ-ವಿಚಾರಗಳನ್ನು ಹೊಂದಿದೆ. ಅದರಲ್ಲೂ ಮದುವೆ ಅಂತಾ ಒಂದೊಂದು ಆಚರಣೆ ಇರುತ್ತದೆ. ಇದೀಗ ಆಂಧ್ರ ಪ್ರದೇಶದಲ್ಲಿ ನಡೆಯುವ ಮದುವೆಯ ಸಂಪ್ರದಾಯವೊಂದು ಎಲ್ಲರ ಹುಬ್ಬೇರಿಸುವಂತಿದೆ.
ಯಾವುದೇ ಪದ್ಧತಿಗಳು ಧರ್ಮ, ಜಾತಿ ಮತ್ತು ಜನಾಂಗ ಮುಂತಾದವುಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಮದುವೆ ಅಂತಾ ಬಂದಾಗ ಅಲ್ಲಿ ವರನಿಗಿಂತ ವಧುವೇ ಎಲ್ಲರ ಕೇಂದ್ರ ಬಿಂದು. ಆಭರಣ, ಉಡುಗೆ ಅಂತಾ ವಧುವನ್ನು ಅದ್ಧೂರಿಯಾಗಿ ಅಲಂಕಾರ ಮಾಡಿರುತ್ತಾರೆ. ಇದರಿಂದ ವಧು ತುಂಬಾ ಚೆನ್ನಾಗಿ ಕಾಣುತ್ತಿರುತ್ತಾಳೆ. ಆದರೆ, ಆಂಧ್ರದಲ್ಲಿ ಇದಕ್ಕೆ ತದ್ವಿರುದ್ಧವಾದ ಪದ್ಧತಿಯೊಂದು ಇಂದಿಗೂ ಜಾರಿಯಲ್ಲಿದೆ.
ಆಂಧ್ರದ ಈ ಒಂದು ಊರಿನಲ್ಲಿ ಮದುವೆ ನಡೆದರೆ, ವರನು ವಧುವಿನಂತೆ ಸಿಂಗಾರ ಮಾಡಿಕೊಂಡರೆ, ವಧುವೂ ವರನಂತೆ ಕಂಗೊಳಿಸುತ್ತಾಳೆ. ಈ ವಿಚಿತ್ರ ಸಂಪ್ರದಾಯ ಆಂಧ್ರದ ಪ್ರಕಾಶಂ ಜಿಲ್ಲೆಯ ಕೊನಕಮಿಟ್ಲ ಮಂಡಲದ ಗೊಟ್ಲಗಾಟುವಿನಲ್ಲಿ ಇಂದಿಗೂ ಜೀವಂತವಾಗಿದೆ. ಗೊಟ್ಲಗಾವಿನ ನಿವಾಸಿ ನಲಿ ರಾಮಯ್ಯ ಎಂಬುವರ ಪುತ್ರ ಯೋಗೇಂದ್ರಬಾಬು ಭಾನುವಾರ ರಾತ್ರಿ ಮದುವೆಯಾದರು. ಒಳ್ಳೆ ಜರಿ ಪಂಚೆ ಹಾಗೂ ಶರ್ಟ್ ತೊಟ್ಟು ಸ್ಟೈಲಿಶ್ ಆಗಿ ಕಾಣಬೇಕಾಗಿದ್ದ ವರ ರೇಷ್ಮೆ ಸೀರೆಯುಟ್ಟು, ಆಭರಣ ತೊಟ್ಟು ವಧುವಿನಂತೆ ಕಂಗೊಳಿಸುತ್ತಿದ್ದ. ಅಲ್ಲದೆ, ಲಿಪ್ಸ್ಟಿಕ್, ಕೈಬಳೆಗಳು ಹಾಗೂ ಕಾಲ್ಗೆಜ್ಜೆಯನ್ನು ಹಾಕಿಕೊಂಡಿದ್ದ.
ಅಂದಹಾಗೆ ಅವರ ಕುಲದಲ್ಲಿ ಹುಡುಗರು ಮದುವೆಯಾದಾಗ ಅವರು ಭಗವಂತನ ಜನ್ಮದಿನವನ್ನು ಆಚರಿಸುತ್ತಾರಂತೆ. ಇದಕ್ಕಾಗಿ ರಾಮಯ್ಯನ ಕುಟುಂಬದವರು ವಧುವಿನಂತೆ ವೇಷ ಧರಿಸಿ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆಯುವುದು ವಾಡಿಕೆ ಎನ್ನುತ್ತಾರೆ. ಮದುವೆಯ ಕ್ಷಣ ಪ್ರಾರಂಭವಾದ ತಕ್ಷಣ, ಹುಡುಗನನ್ನು ವಧುವಿನಂತೆ ಮತ್ತು ಹುಡುಗಿಯನ್ನು ವರನಂತೆ ಅಲಂಕೃತಗೊಳಿಸಲಾಗುತ್ತದೆ. ನಂತರ ಮೆರವಣಿಗೆಯು ನಡೆಯುತ್ತದೆ. ಈ ವೇಳೆ ಗ್ರಾಮದ ಕೊನೆಯಲ್ಲಿರುವ ಜಮ್ಮಿ ಮರಕ್ಕೆ ತೆರಳಿ ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಅಪಾರ ಬಂಧು-ಬಳಗದವರು ಸೇರುತ್ತಾರೆ. ಹೀಗೆ ಮಾಡುವುದರಿಂದ ನವ ದಂಪತಿಗಳಿಗೆ ಗುರಪ್ಪುಡುಸ್ವಾಮಿಯ ಆಶೀರ್ವಾದ ದೊರೆಯುತ್ತದೆ ಮತ್ತು ಪಾಪ ಕರ್ಮಗಳಿಂದ ಮುಕ್ತರಾಗುತ್ತಾರೆ ಎಂಬುದು ನಂಬಿಕೆಯಾಗಿದೆ.
ಆಂಧ್ರ ಪ್ರದೇಶದ ಅನೇಕ ಭಾಗಗಳಲ್ಲಿ ಇದೇ ರೀತಿಯ ಸಂಪ್ರದಾಯಗಳು ಇನ್ನೂ ಆಚರಣೆಯಲ್ಲಿವೆ. ಆದಿವಾಸಿಗಳು ವಿಶೇಷವಾಗಿ ಉತ್ತರಾಂಚಲದ ಪ್ರದೇಶಗಳಲ್ಲಿ ಇಂತಹ ವಿಚಿತ್ರ ಪದ್ಧತಿಗಳನ್ನು ಆಚರಿಸುತ್ತಾರೆ. ಹದಿಹರೆಯದವರು ಈ ವಿಚಿತ್ರ ವೇಷಗಳಲ್ಲಿ ಪೂಜೆ ಮಾಡುವ ಮೂಲಕ ದೇವರ ಅನುಗ್ರಹವನ್ನು ಪಡೆಯುತ್ತಾರೆ. (ಏಜೆನ್ಸೀಸ್)