ಆಪ್ತೆಯ ಮನೆಯಲ್ಲಿ 20 ಕೋಟಿ ನಗದು ಪತ್ತೆ: ಇಡಿ ಅಧಿಕಾರಿಗಳಿಂದ ಬಂಗಾಳ ಸಚಿವನ ಬಂಧನ

Money Found
Published on

ನವದೆಹಲಿ: ಬರೋಬ್ಬರಿ 20 ಕೋಟಿ ರೂಪಾಯಿ ನಗದು ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಎಸ್‌ಎಸ್‌ಸಿ (ಸ್ಕೂಲ್​ ಸರ್ವೀಸ್​ ಕಮಿಷನ್​​) ಹಗರಣ ಸಂಬಂಧ ಇಡಿ ಅಧಿಕಾರಿಗಳು ಶುಕ್ರವಾರ (ಜುಲೈ 22) ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ನಿವಾಸದ ಮೇಲೆ ದಾಳಿ ಮಾಡಿದಾಗ 20 ಕೋಟಿ ರೂಪಾಯಿ ನಗದು ಮತ್ತು 20ಕ್ಕೂ ಹೆಚ್ಚು ಮೊಬೈಲ್​ ಫೋನ್​​ಗಳನ್ನು ಪತ್ತೆಯಾಗಿದ್ದವು. ಈ ಪ್ರಕರಣ ಸಂಬಂಧ ಚಟರ್ಜಿ ಅವರನ್ನು 26 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಅವರ ಆಪ್ತೆಯ ಬಂಧನವು ಆಗಿದೆ.

ಎಂಟು ಅಧಿಕಾರಿಗಳ ತಂಡ ಚಟರ್ಜಿ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು ಮತ್ತು ಹಣ ಪತ್ತೆಯಾದ ಸಂಬಂಧ ಅವರನ್ನು ವಿಚಾರಣೆಗೆ ಒಳಪಡಿಸಿತು. ವಿಚಾರಣೆ ವೇಳೆ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದಕ್ಕೆ ಬಂಧಿಸಿರುವುದಾಗಿ ಇಡಿ ಅಧಿಕಾರಿಗಳು ಹೇಳಿದ್ದಾರೆ. ಅವರನ್ನು ಇಡಿ ಕಚೇರಿಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸುವುದಾಗಿ ಹೇಳಿದೆ. ಬಂಧನಕ್ಕೂ ಮುನ್ನ ವಿಚಾರಣೆ ಸಮಯದಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೋಲ್ಕತ್ತಾದ ನಕ್ತಾಲಾದಲ್ಲಿರುವ ಪಾರ್ಥ ಚಟರ್ಜಿ ಅವರ ನಿವಾಸಕ್ಕೆ ಶನಿವಾರ ಬೆಳಿಗ್ಗೆ ಇಬ್ಬರು ವೈದ್ಯರು ಆಗಮಿಸಿ ತಪಾಸಣೆ ನಡೆಸಿದರು.

ಅಂದಹಾಗೆ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದಾರೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಡಿ ದಾಳಿಯನ್ನು ಖಂಡಿಸಿರುವ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕೇಂದ್ರದ ಬಿಜೆಪಿ ಸರ್ಕಾರವು ತನ್ನ ರಾಜಕೀಯ ಎದುರಾಳಿಗಳಿಗೆ “ಕಿರುಕುಳ” ನೀಡುವ “ಕುತಂತ್ರ” ಎಂದು ಆರೋಪಿಸಿದೆ. ಚಟರ್ಜಿ ಅವರು ಯಾವುದೇ ಹಗರಣ ಮಾಡಿಲ್ಲ. ಅದು ಅವರ ಸ್ವಂತ ಹಣ ಎಂದಿದೆ. ಆದಾಗ್ಯೂ, ತೃಣಮೂಲವು ಅಧಿಕಾರಕ್ಕೆ ಬಂದ ನಂತರ ಪ್ರಾಥಮಿಕ, ಉನ್ನತ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ ಎಂದು ಎಂದು ಬಿಜೆಪಿ ಆರೋಪಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net