

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಬಹುದೊಡ್ಡ ಭದ್ರತಾ ಲೋಪ ಕಂಡುಬಂದಿದೆ. ಮಂಗಳವಾರ ಬಸ್ತಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದ ಸ್ಥಳಕ್ಕೆ ಸಿಎಂ ಯೋಗಿ ಬರುವ ಮುಂಚೆಯೇ ವ್ಯಕ್ತಿಯೊಬ್ಬ ಪರವಾನಗಿ ಪಡೆದ ಗನ್ ಹಿಡಿದು ಒಳನುಸುಳಿರುವುದು ಬೆಳಕಿಗೆ ಬಂದಿದೆ.
ಗನ್ ಹಿಡಿದ ವ್ಯಕ್ತಿಯನ್ನು ಆಡಿಟೋರಿಯಂ ಒಳಗೆ ಕಂಡಕೂಡಲೇ ಆತನನ್ನು ತಕ್ಷಣ ಅಲ್ಲಿಂದ ಭದ್ರತಾ ಸಿಬ್ಬಂದಿ ದೂರ ಕರೆದೊಯ್ದಿದ್ದಾರೆ. ಇದನ್ನು ಬಹುದೊಡ್ಡ ಭದ್ರತಾ ಲೋಪ ಎಂದು ಪರಿಗಣಿಸಿರುವ ಸರ್ಕಾರ ನಾಲ್ವರು ಪೋಲಿಸ್ ಸಿಬ್ಬಂದಿಯನ್ನು ಅಮಾನತು ಮಾಡಿದೆ.
ಸಿಎಂ ಯೋಗಿ ಅವರ ಮಂಗಳವಾರ ಬಸ್ತಿ ಜಿಲ್ಲೆಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಭದ್ರತೆಯಾಗಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಜಿಲ್ಲೆಯ ಇತರೆ ಠಾಣೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್ ಬರುವ 45ಕ್ಕೂ ಮುಂಚೆಯೇ ಅದೇ ಜಿಲ್ಲೆಯ ಗೌರ್ ಬ್ಲಾಕ್ ಪ್ರತಿನಿಧಿ ಜಾತ್ಶಂಕರ್ ಶುಕ್ಲ ಎಂಬಾತ ಆಡಿಟೋರಿಯಂನಲ್ಲಿದ್ದ.
ಜಾತ್ಶಂಕರ್ ಶುಕ್ಲ ಅವರ ಕಿರಿಯ ಸಹೋದರ ಅಮರ್ದೀಪ್ ಅವರ ಬಾಮೈದ ಜೀತೇಂದರ್ ಪಾಂಡೆ ಲೈಸೆನ್ಸ್ ಪಡೆದಿದ್ದ ರಿವಾಲ್ವರ್ ಹಿಡಿದು ಆಡಿಟೋರಿಯಂಗೆ ಮುಂಚೆಯೇ ಆಗಮಿಸಿದ್ದ. ಆನಂತರ ರಿವಾಲ್ವರ್ ಗಮನಿಸಿದ ಪೊಲೀಸ್ ಸಿಬ್ಬಂದಿ ಜೀತೇಂದರ್ ಪಾಂಡೆ ಸಮೇತ ಗನ್ ಅನ್ನು ವಶಕ್ಕೆ ಪಡೆದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಹಿರಿಯ ಅಧಿಕಾರಿ ಕರ್ತವ್ಯ ನಿರ್ಲಕ್ಷ್ಯ ಆರೋಪದಲ್ಲಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. (ಏಜೆನ್ಸೀಸ್)