

ಹೈದರಾಬಾದ್: ಅತಿ ಅಮಾನವೀಯ ಘಟನೆಯೊಂದು ತೆಲಂಗಾಣದ ವಿಕಾರಾಬಾದ್ನಲ್ಲಿ ನಡೆದಿದೆ. ಸ್ಥಳೀಯರ ಪ್ರಕಾರ ಯುವಕನೊಬ್ಬ ಪ್ರೀತಿಯೆಂಬ ಮಾಯಾಜಾಲದಲ್ಲಿ ಬಿದ್ದಿದ್ದ. ಹಿರಿಯರು ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಯುವಕನಿಗೆ ಪ್ರೇಯಸಿ ಮನವೊಲಿಸಿದ್ದಾಳೆ. ಮಾತು ನಂಬಿದ ಪ್ರಿಯಕರ ಸಾವಿನ ಹಾದಿ ಹಿಡಿದಿದ್ದಾನೆ.
ವಿನಯ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ವಿಕಾರಾಬಾದ್ ಜಿಲ್ಲೆಯ ದೋಮ ಮಂಡಲದ ಕಿಶ್ತಪುರ್ ಗ್ರಾಮದಲ್ಲಿ ಘಟನೆ ನಡೆದಿದೆ. ಜೂನ್ 29ರಂದು ಅತಿಯಾಗಿ ಡ್ರಗ್ಸ್ ಸೇವನೆ ಮಾಡಿದ ವಿನಯ್ ತನ್ನ ಸಾವನ್ನು ತಾನೇ ತಂದುಕೊಂಡಿದ್ದಾನೆ. ಆತ್ಮಹತ್ಯೆಯ ಬಗ್ಗೆ ವರದಿ ಮಾಡದೇ ಆತನ ಅಂತ್ಯಕ್ರಿಯೆಯನ್ನು ಕುಟುಂಬದ ಸದಸ್ಯರು ನೆರವೇರಿಸಿದರು. ಇದಾದ ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ವಿನಯ್ ಆತ್ಮಹತ್ಯೆ ಪ್ರೀತಿಯೇ ಕಾರಣ ಎಂದು ತಿಳಿದಕೂಡಲೇ ಆತನ ಕುಟುಂಬಸ್ಥರು ದೂರು ದಾಖಲಿಸಿದರು. ಇದಾದ ಬೆನ್ನಲ್ಲೇ ಸಮಾಧಿ ಮಾಡಲಾಗಿದ್ದ ವಿನಯ್ ಶವವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿದಾಗ ಅತಿಯಾದ ಡ್ರಗ್ಸ್ ಸೇವನೆಯಿಂದ ಮೃತಪಟ್ಟಿರುವುದು ಖಚಿತವಾಗಿದೆ.
ವಿನಯ್ ಕಳೆದ ಕೆಲವು ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಅವರ ಪ್ರೀತಿಗೆ ಪ್ರೇಯಸಿ ಮನೆಯವರ ಒಪ್ಪಿಗೆ ಇರಲಿಲ್ಲ. ಇದಾದ ಬಳಿಕ ಇಬ್ಬರು ಒಂದು ಒಪ್ಪಂದಕ್ಕೆ ಬಂದಿದ್ದರು. ಮೊಬೈಲ್ ಮೂಲಕ ಚಾಟಿಂಗ್ ನಡೆಸಿದ್ದ ಇಬ್ಬರು ಡ್ರಗ್ಸ್ ಸೇವಿಸಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
ಪ್ರೇಯಸಿಯ ಮಾತನ್ನು ನಂಬಿದ ಯುವಕ ಕೊನೆಗೂ ಆತ್ಮಹತ್ಯೆ ಮಾಡಿಕೊಂಡೇ ಬಿಟ್ಟ. ಆದರೆ, ಆತನ ಪ್ರೇಯಸಿ ಮಾತ್ರ ಒಪ್ಪಂದದ ಪ್ರಕಾರ ನಡೆಯಲೇ ಇಲ್ಲ. ಬದಲಾಗಿ ಪ್ರಿಯಕರನನ್ನು ಸಾವಿನ ಕೂಪಕ್ಕೆ ತಳ್ಳಿ, ಆತನ ಅಂತ್ಯಕ್ರಿಯೆಯ ದಿನವೇ ಆಕೆ ಮತ್ತೊಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ.
ಇದೀಗ ಈ ವಿಚಾರ ತಿಳಿದಿರುವ ವಿನಯ್ ಪಾಲಕರು ಆತನ ಸಾವಿನ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಯುವತಿ ಪ್ರಚೋದನೆ ನೀಡಿದ್ದಾಳೆಂದು ದೂರಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್)