ಪೊಲೀಸ್​ ಠಾಣೆಯಿಂದ ಮನೆಗೆ ಬಂದು ಯುವತಿ ಆತ್ಮಹತ್ಯೆ: ಠಾಣೆಯಲ್ಲೇ ನಡೆಯಿತು ಮಹಾ ಪ್ರಮಾದ!

Moufia
Published on

ಕೊಚ್ಚಿ: ಗಂಡ ಮತ್ತು ಆತನ ಕುಟುಂಬದ ವಿರುದ್ಧ ಕೇರಳದ ಅಲುವಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದ ಯುವತಿಯೊಬ್ಬಳು ಇದೀಗ ಅಲುವಾದ ಎಡಯಪುರಂ ನಿವಾಸದಲ್ಲಿ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೃತಳನ್ನು ಮೌಫಿಯಾ ಪರ್ವೀನ್​ (23) ಎಂದು ಗುರುತಿಸಲಾಗಿದೆ. ಈಕೆ ಎಲ್​ಎಲ್​ಬಿ ಓದುತ್ತಿದ್ದಳು. ಪೊಲೀಸ್​ ಠಾಣೆಗೆ ದೂರು ನೀಡಿ ಮನೆಗೆ ಬಂದ ಬೆನ್ನಲ್ಲೇ ಮೌಫಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಠಡಿಯಲ್ಲಿ ಡೆತ್​ನೋಟ್​ ಪತ್ತೆಯಾಗಿದ್ದು, ದೂರನ್ನು ನಿರ್ಲಕ್ಷಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ನನಗೆ ಪೊಲೀಸರಿಂದ ಯಾವುದೇ ನ್ಯಾಯ ದೊರಕಲಿಲ್ಲ. ಬದಲಾಗಿ ಗಂಡನ ಕುಟುಂಬದ ಜತೆ ಸಂಧಾನಕ್ಕಾಗಿ ನನ್ನನ್ನು ಕರೆಸಿದರು ಎಂದು ಮೌಫಿಯಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಆದಾಗ್ಯೂ, ಸಂಧಾನ ನಡೆಯುವ ವೇಳೆ ಮೌಫಿಯಾ ತನ್ನ ಗಂಡನ ಕಪಾಳಕ್ಕೆ ಬಾರಿಸಿದ್ದಳು. ಅದನ್ನು ನೋಡಿ ಕೋಪಗೊಂಡ ಪೊಲೀಸರು ಠಾಣೆಯ ಒಳಗೆ ಇಂತಹ ಕೆಲಸ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮೌಫಿಯಾಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ. ಇದರಿಂದ ಮನನೊಂದಿದ್ದ ಮೌಫಿಯಾ, ನ್ಯಾಯಾ ಸಿಗಲಿಲ್ಲ ಎಂಬ ನಿರಾಶೆಯಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.

ಮೌಫಿಯಾ ತೋಡುಪುಳ್ಳಾದ ಖಾಸಗಿ ಕಾಲೇಜೊಂದರಲ್ಲಿ ಎಲ್​ಎಲ್​ಬಿ ಓದುತ್ತಿದ್ದಳು. ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲಾಮಾಸ್ಸೆರಿ ಮೆಡಿಕಲ್​ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net