

ಮೈಮಿ: ಅಂತ್ಯ ಸಂಸ್ಕಾರದ ವೇಳೆ ತಂದೆಯ ಶವದ ಮುಂದೆ ಫೋಟೋಶೂಟ್ ಮಾಡಿಸಿದ ಫ್ಲೊರಿಡಾದ ಮೈಮಿ ನಗರದ ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಮಾಡೆಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿವೆ. ತಂದೆಯ ಶವದ ಪೆಟ್ಟಿಗೆಯನ್ನು ತೆಗೆದು ಫೋಟೋಗೆ ಪೋಸ್ ನೀಡಿರುವುದನ್ನು ಖಂಡಿಸಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಈ ನಾಚಿಕೆಗೇಡಿನ ಕೆಲಸ ಮಾಡಿದವಳ ಹೆಸರು ಜಯ್ನೆ ರಿವೇರಾ. ಈಕೆ ಇನ್ಸ್ಟಾಗ್ರಾಂನಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾಳೆ. ಫೋಟೋಶೂಟ್ ಮಾಡಿಸಿ, ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಿವೇರಾ, ಚಿಟ್ಟೆ ದೂರ ಹಾರಿದೆ. ನೀವು ನನ್ನ ಬೆಸ್ಟ್ ಫ್ರೆಂಡ್, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಚೆನ್ನಾಗಿ ಬದುಕಿದ ಜೀವ ಎಂದು ಫೋಟೋಗಳಿಗೆ ಅಡಿಬರಹ ಬರೆಯಲಾಗಿದೆ.
ಒಟ್ಟು 8 ಫೋಟೋಗಳನ್ನು ರಿವೇರಾ, ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಾಕಷ್ಟು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದಾಳೆ. ಫೋಟೋ ತೆಗೆಸಿದ್ದಲ್ಲದೆ, ಫೋಟೋ ನಗುತ್ತಾ ಪೋಸ್ ನೀಡಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಫೋಟೋ ವೈರಲ್ ಆಗುತ್ತಿದ್ದಂತೆ 20 ವರ್ಷದ ಮಾಡೆಲ್ನನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು, ಇದೊಂದು ಕೆಟ್ಟ ನಡವಳಿಕೆ ಎಂದು ಜರಿದಿದ್ದಾರೆ. ಈ ರೀತಿ ಮಾಡಲು ಮನಸ್ಸಾದರೂ ಹೇಗೆ ಬಂತು ಟೀಕಿಸಿದ್ದಾರೆ. ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಫೋಟೋ ಡಿಲೀಟ್ ಮಾಡಿರುವ ರಿವೇರಾ, ಎಲ್ಲರ ಬಳಿ ಕ್ಷಮೆಯಾಚಿಸಿದ್ದಾಳೆ. (ಏಜೆನ್ಸೀಸ್)