

ಹೈದರಾಬಾದ್: ಇಡೀ ಹೈದರಾಬಾದ್ನಲ್ಲಿ ಭಾರೀ ಸದ್ದು ಮಾಡಿದ ಆರ್ಕೆಸ್ಟ್ರಾ ಟ್ರೂಪ್ ಡಾನ್ಸರ್ ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.
ರೇಸ್ ಕೋರ್ಸ್ ಬುಕ್ಕಿ ನಹೀದ್ ಮತ್ತು ಕ್ಯಾಬ್ ಡ್ರೈವರ್ ಮೊಹಮ್ಮದ್ ಅಪ್ಸರ್ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ಸತ್ಯ ಬೆಳಕಿಗೆ ಬಂದಿದೆ. ತನಿಖೆಯ ಪ್ರಕಾರ ಕೊಲೆಯಾದ ಶರಿನಾ ಫಾತಿಮಾ, ಕ್ಯಾಬ್ ಡ್ರೈವರ್ ಅಪ್ಸರ್ ಜತೆ ಫಾತಿಮಾಗೆ ವಿವಾಹೇತರ ಸಂಬಂಧ ಇತ್ತು. ಒಂದು ವರ್ಷದ ಹಿಂದಷ್ಟೇ ಫಾತಿಮಾ ಗಂಡ ಮೃತಪಟ್ಟಿದ್ದ. ಇದಾದ ಬಳಿಕ ಮದುವೆ ಆಗುವಂತೆ ಕ್ಯಾಬ್ ಡ್ರೈವರ್ಗೆ ಫಾತಿಮಾ ಒತ್ತಡ ಹಾಕಿದ್ದಳು.
ಆರ್ಕೆಸ್ಟ್ರಾದಲ್ಲಿ ಡಾನ್ಸ್ ಮಾಡುವುದನ್ನು ನಿಲ್ಲಿಸಿದರೆ ಮದುವೆ ಆಗುವುದಾಗಿ ಕ್ಯಾಬ್ ಡ್ರೈವರ್ ಭರವಸೆ ನೀಡಿದ್ದ. ಆದರೆ, ಫಾತಿಮಾ ಡಾನ್ಸ್ ಮಾಡುವುದನ್ನು ನಿಲ್ಲಿಸಿರಲಿಲ್ಲ. ಹೀಗಾಗಿ ಮದುವೆ ಆಗಲು ಕ್ಯಾಬ್ ಡ್ರೈವರ್ ನಿರಾಕರಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜಗಳ ತಾರಕಕ್ಕೇರಿ ನ. 9ರಂದು ಕ್ಯಾಬ್ ಡ್ರೈವರ್, ಫಾತಿಮಾಳಿಗೆ ಚೆನ್ನಾಗಿ ಕುಡಿಸಿ, ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಇನ್ನು 30 ವರ್ಷದ ಫಾತಿಮಾಗೆ 7 ಮಕ್ಕಳಿದ್ದರು. ಒಂದು ವರ್ಷದ ಹಿಂದಷ್ಟೇ ಗಂಡ ಸತ್ತಿದ್ದ. ಆರ್ಕೆಸ್ಟ್ರಾದಲ್ಲಿ ಡಾನ್ಸ್ ಮಾಡುತ್ತಾ ಮಕ್ಕಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದಳು. ಹೈದರಾಬಾದ್ನ ಮುಸ್ತಾಫನಗರದಲ್ಲಿ ನೆಲೆಸಿದ್ದಳು. ಇದೀಗ ಫಾತಿಮಾ ಹತ್ಯೆಯಾಗಿದ್ದು, 7 ಮಕ್ಕಳು ಅನಾಥವಾಗಿವೆ. ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)