ಎದುರುಮನೆ ಯುವಕನ ಪರಿಚಯ: ಹೆಣ್ಣು ಮಕ್ಕಳೊಂದಿಗೆ ಮನೆಬಿಟ್ಟ ಮಹಿಳೆಯಿಂದ ಪತಿಗೆ ಶಾಕ್​!

HYD Woman
Published on

ಹೈದರಾಬಾದ್​: ವಯಸ್ಸಿನಲ್ಲಿ ತನಗಿಂತ ಕಿರಿಯವನಾದ ಯುವಕ ಪರಿಚಯವು ಮಹಿಳೆಯೊಬ್ಬಳ ವೈವಾಹಿಕ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದು, ಮೂವರು ಹೆಣ್ಣು ಮಕ್ಕಳ ಜತೆ ಮಹಿಳೆಯು ಕಣ್ಮರೆಯಾಗಿರುವು ಹೈದರಾಬಾದ್​ನಲ್ಲಿ ಭಾರೀ ಸುದ್ದಿಯಾಗಿದೆ.

ಕಿಶನ್​ ಶರ್ಮಾ ಮತ್ತು ಪೂಜಾ ಅಲಿಯಾಸ್​ ರಾಗಿಣಿ (34) ದಂಪತಿ ಹೈದರಾಬಾದ್​ನ ಕಾಮಾಟಿಪುರ ಪೊಲೀಸ್​ ಠಾಣಾ ವ್ಯಾಪ್ತಿಯ ಮುರಳಿಗುಮ್ಮಾಸ್​ ಏರಿಯಾದ ನಿವಾಸಿಗಳು. ಇಬ್ಬರು 16 ವರ್ಷದ ಹಿಂದೆ ಮದುವೆಯಾಗಿದ್ದು, ಮೂವರು ಹೆಣ್ಣು ಮಕ್ಕಳಿದ್ದಾರೆ.

ಪೂಜಾ ಕುಟುಂಬ ಮಲಕ್​ಪೇಟೆಯಲ್ಲಿ ನೆಲೆಸಿದ್ದಾಗ ಅವರ ಮನೆಯ ಎದುರು ವಾಸವಿದ್ದ ಪವನ್​ (30) ಎಂಬಾತನ ಪರಿಚಯ ಆಗಿರುತ್ತದೆ. ಇಬ್ಬರು ಆಗಾಗ ಫೋನ್​ನಲ್ಲಿ ಮಾತನಾಡುವುದು ಸಾಮಾನ್ಯವಾಗಿರುತ್ತದೆ. ಇದು ಕಿಶನ್​ಗೆ ತಿಳಿದು, ದಂಪತಿ ನಡುವಿನ ವಿರಸಕ್ಕೆ ಕಾರಣವಾಗಿ, ಆಗಾಗ ಜಗಳಗಳಾಗುತ್ತಿರುತ್ತವೆ.

ಇಲ್ಲೇ ಉಳಿದುಕೊಂಡರೆ ಒಳ್ಳೆಯದಲ್ಲ ಎಂಬ ನಿರ್ಧಾರಕ್ಕೆ ಬರುವ ಕಿಶನ್​, ಮಲಕ್​ಪೇಟೆಯಿಂದ ಕಾಮಾಟಿಪುರ ಮುರಳಿಗುಮ್ಮಾಸ್​ ಏರಿಯಾಗಿ 8 ತಿಂಗಳ ಹಿಂದೆ ಸ್ಥಳಾಂತರಗೊಂಡಿರುತ್ತಾರೆ. ಆದರೆ, ಮನೆ ಬದಲಾದರೂ ಪೂಜಾಳ ಮನಸ್ಸು ಮಾತ್ರ ಬದಲಾಗಲೇ ಇಲ್ಲ. ಪವನ್​ ಜನತೆ ಮಾತನಾಡುವುದನ್ನು ಮುಂದುವರಿಸುತ್ತಾಳೆ. ಇದರ ನಡುವೆ ಇತ್ತೀಚೆಗಷ್ಟೇ ಪವನ್​ ಕೂಡ ಮುರುಳಿಗುಮ್ಮಾಸ್​ಗೆ ಸ್ಥಾಳಾಂತರವಾಗುತ್ತಾನೆ. ಇದು ಕೂಡ ಕಿಶನ್​ ಗಮನಕ್ಕೆ ಬರುತ್ತದೆ. ಇಬ್ಬರ ನಡುವೆ ಮತ್ತೆ ಜಗಳವಾಗುತ್ತದೆ.

ಹೀಗಿರುವಾಗ ಪೂಜಾ ತನ್ನ ಹೆಣ್ಣು ಮಕ್ಕಳಾದ ಕೀರ್ತಿ (17), ಮೋಹಿನಿ ಅಲಿಯಾಸ್​ ಮೀನಾ (14) ಮತ್ತು ಗೋಪಿ (12) ಜತೆ ಜುಲೈ 16ರಂದು ತಿರುಪತಿಗೆಂದು ತೆರಳುತ್ತಾರೆ. ಆದರೆ, ಮತ್ತೆ ಹಿಂದಿರುವುದೇ ಇಲ್ಲ. ಇದರಿಂದ ಗಾಬರಿಗೆ ಒಳಗಾಗುವ ಕಿಶನ್​ ಕಾಮಾಟಿಪುರ ಪೊಲೀಸ್​ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸುತ್ತಾರೆ. ಪವನ್​ ಜತೆ ಓಡಿ ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net