

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಇಂಧನ ದರ ಜನರಿಗೆ ಬಲು ಭಾರವಾಗಿದ್ದು, ವಿದ್ಯುತ್ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅನೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಇಷ್ಟೇ ಅಲ್ಲದೆ, ಅನೇಕರು ಕೂಡ ಹೊಸ ಹೊಸ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಇದೀಗ ಅಂಥದ್ದೇ ಹೊಸ ಸಂಶೋಧನೆಯ ಫಲವಾಗಿ ಬ್ಯಾಟರಿ ಚಾಲಿತ ಬೈಸಿಕಲ್ ತಯಾರಿಯಾಗಿದೆ.
ಕೇವಲ 5 ರೂಪಾಯಿಯಲ್ಲಿ ಬರೋಬ್ಬರಿ 40 ಕಿ.ಮೀ ದೂರವನ್ನು ಬ್ಯಾಟರಿ ಚಾಲಿತ ಸೈಕಲ್ನಿಂದ ಕ್ರಮಿಸಬಹುದು. ಇದನ್ನು ಹೈದರಬಾದ್ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಓರ್ವ ತಯಾರಿಸಿದ್ದು, ಈತನ ವಿನೂತನ ಬೈಸಿಕಲ್ಗೆ ಎಲ್ಲರೂ ಫಿದಾ ಆಗಿದ್ದಾರೆ. ನಗರದಲ್ಲಿ ವಾಯಮಾಲಿನ್ಯ ಹೆಚ್ಚಾಗಿದ್ದು, ಅದನ್ನು ಕಡಿಮೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಬೈಸಿಕಲ್ ಕಂಡುಹಿಡಿದಿರುವ ಅಬ್ದುಲ್ ಅಜೀಮ್ ತಿಳಿಸಿದ್ದಾರೆ.
ಅಬ್ದುಲ್ ಅಜೀಮ್ ಅವರು ಹೈದರಾಬಾದ್ನ ವೆಂಗಲಾ ರಾವ್ ನಗರದವರು. ನಗರದಲ್ಲಿ ಹೆಚ್ಚಾದ ವಾಹನಗಳಿಂದ ವಾಯುಮಾಲಿನ್ಯವೂ ದುಪ್ಪಟ್ಟಾಗುತ್ತಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಬ್ದುಲ್ ಅಜೀಮ್, ಪರಿಸರಕ್ಕೆ ಉಪಯುಕ್ತ ಕೊಡುಗೆ ನೀಡುವ ಉದ್ದೇಶದಿಂದಲೇ ಬ್ಯಾಟರಿ ಚಾಲಿತ ಬೈಸಿಕಲ್ ಕಂಡುಹಿಡಿದಿದ್ದಾರೆ. ತಮ್ಮ ಕಾಲನಿಯಲ್ಲಿ ವಾಸವಿದ್ದ ಪ್ರಮುಖ ವಿಜ್ಞಾನಿ ರಘುನಂದನ್ ಅವರ ಸಲಹೆಗಳನ್ನು ಪಡೆದುಕೊಂಡು ಬೈಸಿಕಲ್ ಸಂಶೋಧಿಸಿದ್ದಾರೆ.
ಮನೆಯಲ್ಲಿದ್ದ ಹಳೆಯ ಸೈಕಲ್ ತೆಗೆದುಕೊಂಡ ಅಬ್ದುಲ್ ಅಜೀಮ್, ಅದಕ್ಕೆ 250 ವ್ಯಾಟ್ ಬಿಎಲ್ಡಿಸಿ ಮೋಟರ್, 18 ಎಎಚ್ ವೋಲ್ಟ್ ಸಾಮರ್ಥ್ಯದ ಎ ಬ್ಯಾಟರಿ, ಲೈಟ್, ಹಾರ್ನ್ ಮತ್ತು ಆಕ್ಸಿಲರೇಟರ್ ಮತ್ತು ಇತರೆ ಬಿಡಿಭಾಗಗಳನ್ನು ಜೋಡಿಸಿ ಬ್ಯಾಟರಿ ಚಾಲಿತ ಬೈಸಿಕಲ್ ಅನ್ನು ಅಜೀಮ್ ತಯಾರಿಸಿದ್ದಾರೆ.
ಬೈಸಿಕಲ್ಗಾಗಿ 6,500 ಸಾವಿರ ರೂ. ಅನ್ನು ಅಜೀಮ್ ಖರ್ಚು ಮಾಡಿದ್ದಾರೆ. ಹೆಚ್ಚು ಹಣ ಖರ್ಚಾಗಲಿದೆ ಎಂದು ಮೊದಲೇ ತಿಳಿದಿದ್ದ ಅಜೀಮ್ ಹೊಸ ಬ್ಯಾಟರಿಯ ಬದಲಾಗಿ ಸೆಕೆಂಡ್ ಹ್ಯಾಂಡ್ ಬ್ಯಾಟರಿಗಳನ್ನು ಖರೀದಿಸಿ ಅಳವಡಿಸಿದ್ದಾರೆ. ಎಲ್ಲ ಕೆಲಸ ಮುಗಿದ ಬಳಿಕ ರಸ್ತೆ ಮೇಲೆ ಪ್ರಯೋಗವನ್ನು ಮಾಡಿದ್ದು, ಬೈಸಿಕಲ್ ಕಾರ್ಯನಿರ್ವಹಿಸುವುದನ್ನು ನೋಡಿ ಹಲವರ ಹುಬ್ಬೇರಿದೆ.
5 ರೂಪಾಯಿ ಚಾರ್ಜ್ ಮಾಡಿದರೆ 40 ಕಿ.ಮೀ ವರೆಗೆ ಚಲಿಸುತ್ತದೆ. ಅಲ್ಲದೆ, ಪೆಡಲ್ ಕೂಡ ಇದ್ದು, ಬ್ಯಾಟರಿ ಆಫ್ ಆದಾಗ ಅದನ್ನು ಉಪಯೋಗಿಸಬಹುದು. ಅಜೀಮ್ ಅವರು ಪ್ರತಿದಿನ ಕಚೇರಿಗೆ ಅದರಲ್ಲೇ ತೆರಳುತ್ತಾರೆ. ಪೆಟ್ರೋಲ್-ಡೀಸೆಲ್ ವಾಹನಗಳನ್ನು ಅವಲಂಬಿಸದೇ ಪರಿಸರ ಸ್ನೇಹಿ ವಾಹನಗಳನ್ನು ಬಳಸಿ ಎಂದು ಅಜೀಮ್ ಜನರಲ್ಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್)