ಬೇಕಂತಲೇ ಬೈಕ್​ ಡಿಕ್ಕಿ ಹೊಡೆದು ಪರಾರಿಯಾದ ಕಾನೂನು ವಿದ್ಯಾರ್ಥಿ: ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

Bike
Published on

ನವದೆಹಲಿ: ಉದ್ದೇಶಪೂರ್ವಕವಾಗಿಯೇ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿ ಬೈಕ್​ ಸವಾರನಿಗೆ ಡಿಕ್ಕಿ ಹೊಡೆದ ಯುವಕನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತಂಕಕಾರಿ ಸಂಗತಿಯೆಂದರೆ ಡಿಕ್ಕಿ ಹೊಡೆದ ಕಾರು ಚಾಲಕ ಓರ್ವ ಕಾನೂನು ವಿದ್ಯಾರ್ಥಿ.

ಪೊಲೀಸ್​ ಮೂಲಗಳ ಪ್ರಕಾರ, ಅರ್ಜಾಂಘರ್ ಮೆಟ್ರೋ ನಿಲ್ದಾಣದ ಬಳಿ ಬೈಕ್ ಸವಾರ ಮತ್ತು ಕಾರು ಚಾಲಕನ ನಡುವೆ ಸಣ್ಣ ಪ್ರಮಾಣದಲ್ಲಿ ವಾಗ್ವಾದ ನಡೆದಿದೆ. ಇದಾದ ಬಳಿಕ ಸ್ಕಾರ್ಪಿಯೋ ಚಲಾಯಿಸುತ್ತಿದ್ದ ಅನುಜ್ ಚೌಧರಿ ಎಂಬಾತ ಅತಿವೇಗದಲ್ಲಿ ಕಾರು ಚಲಾಯಿಸಿಕೊಂಡು ಹೋಗಿ ರಾಯಲ್ ಎನ್‌ಫೀಲ್ಡ್ ಬೈಕ್ ಚಲಾಯಿಸುತ್ತಿದ್ದ ಶ್ರೇಯಾಂಶ್‌ ಎಂಬುವರಿಗೆ ಡಿಕ್ಕಿ ಹೊಡೆದಿದ್ದಾರೆ. ಇದಕ್ಕೂ ಮೊದಲೇ ಕಾರು ಹರಿಸಿ ಕೊಲ್ಲುವುದಾಗಿ ಚೌಧರಿ ಬೆದರಿಕೆ ಹಾಕಿದ್ದ. ಇದರ ಬೆನ್ನಲ್ಲೇ ಡಿಕ್ಕಿ ಹೊಡೆದ್ದು, ಉದ್ದೇಶಪೂರ್ವಕವಾಗಿಯೇ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದು ಗಾಯಗೊಂಡ ಬೈಕ್ ಸವಾರ ಶ್ರೇಯಾಂಶ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವಿಡಿಯೋವನ್ನು ಅನುರಾಗ್ ಅಯ್ಯರ್ ಎಂಬುವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಪಿಎಂಒ ಇಂಡಿಯಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನವದೆಹಲಿ ಡಿಸಿಪಿಗೆ ಟ್ಯಾಗ್ ಮಾಡಿದ್ದಾರೆ.

ನಾನು ಮತ್ತು ತನ್ನ ಸ್ನೇಹಿತರು ಅರಾವಳಿಯಲ್ಲಿರುವ ದೇವಸ್ಥಾನಕ್ಕೆ ಹೋಗಿ, ಹಿಂತಿರುಗಿ ಬರುವಾಗ ಅತಿ ವೇಗದ ಚಾಲನೆ ಮಾಡುತ್ತಿದ್ದ ಅನುಜ್​ನನ್ನು ಪ್ರಶ್ನೆ ಮಾಡಿದೆ. ಅದಕ್ಕೆ ಆತ ನನ್ನ ಜೊತೆ ವಾಗ್ವಾದಕ್ಕೆ ಇಳಿದ. ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿದ ಎಂದು ಶ್ರೇಯಾಂಶ ಹೇಳಿಕೆ ನೀಡಿದ್ದಾರೆ.

ಟ್ವಿಟರ್ ವಿಡಿಯೋವನ್ನು ಗಮನಿಸಿ ಫೀಲ್ಡಿಗಿಳಿದ ದೆಹಲಿ ಪೊಲೀಸರು, ಅನುಜ್ ಚೌಧರಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇದರ ನಡುವೆ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net