ಬೈಕ್​ನಲ್ಲಿ ಬಂದು ಭಾನುವಾರ ಮಾತ್ರ ಸರಗಳ್ಳತನ! ಖದೀಮನ ಹಿನ್ನೆಲೆ ತಿಳಿದು ಬೆರಗಾದ ಹಾಸನ ಪೊಲೀಸರು

'
Published on

ಹಾಸನ: ಬೈಕ್​ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಬಂಧಿತ ಖದೀಮನೊಬ್ಬನ ಹಿನ್ನೆಲೆ ತಿಳಿದು ಪೊಲೀಸರೇ ಅಚ್ಚರಿಗೆ ಒಳಗಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಎಂ.ಕೆ. ಅಭಿಷೇಕ್ ಬಂಧಿತ ಖದೀಮ. ಈತ ಮೂಲತಃ ಮೈಸೂರು ಜಿಲ್ಲೆಯ ಸಾಲಿಗ್ರಾಮ ಹೋಬಳಿಯ ಮುಂಡೂರು ಗ್ರಾಮದ ನಿವಾಸಿ.

ಕಳೆದ ಆಗಸ್ಟ್ 6 ರಂದು ಹೊಳೆನರಸೀಪುರದಲ್ಲಿ ನಡೆದಿದ್ದ ಸರಗಳ್ಳತನ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ದೂರು ಸ್ವೀಕರಿಸಿದ ಹಾಸನ ಪೊಲೀಸರು ತನಿಖೆ ಆರಂಭಿಸಿ ಆರೋಪಿ ಅಭಿಷೇಕ್​ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತನ ಹಿನ್ನೆಲೆಯನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಅಭಿಷೇಕ್​ ಓರ್ವ ಎಂ ಕಾಮ್​ ಪದವೀಧರ. ಈತ ಹೊಳೆನರಸೀಪುರ ಭಾರತ್ ಫೈನಾನ್ಸ್​ನಲ್ಲಿ ಅಸಿಸ್ಟೆಂಟ್ ಫೀಲ್ಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಮತ್ತು ತಿಂಗಳಿಗೆ 35 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ.

ಅಷ್ಟು ಸಂಬಳ ಪಡೆದರು ಆತ ಆನ್​ಲೈನ್ ರಮ್ಮಿ ಚಟ ಅಂಟಿಸಿಕೊಂಡಿದ್ದ. ಆನ್​ಲೈನ್​ ಜೂಜಾಡಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಕೊನೆಗೆ ಹಣಕ್ಕಾಗಿ ಸರಗಳ್ಳತನಕ್ಕೆ ಇಳಿದಿದ್ದ. ಗಮನಾರ್ಹವೆಂದರೆ, ಕೇವಲ ಭಾನುವಾರ ಮಾತ್ರ ಸರಗಳ್ಳತನಕ್ಕೆ ಇಳಿಯುತ್ತಿದ್ದ. ಇದೀಗ ಅಭಿಷೇಕ್​ನನ್ನು ಬಂಧಿಸಲಾಗಿದ್ದು, ಆತನಿಂದ ಒಟ್ಟು ಆರೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದೆ.

ಅಭಿಷೇಕ್​ ಒಟ್ಟು ಏಳು ಪ್ರಕರಣದಲ್ಲಿ ಭಾಗಿಯಾಗಿದ್ದ. ಹಾಸನ ಗೊರೂರು ಠಾಣೆ, ಹೊಳೆನರಸೀಪುರ, ಅರಕಲಗೂಡು ಕೊಣನೂರು, ಅರಸೀಕೆರೆ ದುದ್ದ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಭಿಷೇಕ್​ ವಿಚಾರಣೆ ನಡೆಯುತ್ತಿದೆ. ಅಲ್ಲದೆ, ತನಿಖೆಯು ಸಹ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net