

ಮುಂಬೈ: ಸವಾಲುಗಳನ್ನು ಮೆಟ್ಟಿನಿಂತು ಗುರಿಯೆಡೆಗೆ ಸಾಗಿದರೆ ಯಶಸ್ಸು ಖಂಡಿತ ಎನ್ನುವುದಕ್ಕೆ ಈ ಮೇಲಿನ ಫೋಟೋದಲ್ಲಿ ನೀವು ನೋಡುತ್ತಿರುವ ಶಹೀನಾ ಅತ್ತರ್ವಾಲಾ ತಾಜಾ ಉದಾಹರಣೆ. ಕೊಳಗೇರಿಯಲ್ಲಿ ಬೆಳೆದು ಹಲವು ಸಮಸ್ಯೆಗಳನ್ನು ಎದುರಿಸಿ ಇಂದು ಮೈಕ್ರೋಸಾಫ್ಟ್ನಂತಹ ದೈತ್ಯ ಟೆಕ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಮುಂಬೈನ ಅಪಾರ್ಟ್ಮೆಂಟ್ನಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಆದರೆ, ಸ್ಲಮ್ನಿಂದ ಮೈಕ್ರೋಸಾಫ್ಟ್ವರೆಗೆ ಅವರು ನಡೆದುಬಂದು ಹಾದಿ ಸುಗಮವಾಗಿರಲಿಲ್ಲ. ಅವರು ಎದುರಿಸಿದ ಸವಾಲುಗಳು, ಅವರು ಪಟ್ಟ ಶ್ರಮದ ಕುರಿತಾದ ಒಂದು ಸ್ಫೂರ್ತಿದಾಯ ಸ್ಟೋರಿ ಇಲ್ಲಿದೆ....
ಅಂದಹಾಗೆ ಶಹೀನಾ ಅತ್ತರ್ವಾಲಾ ಮೈಕ್ರೋಸಾಫ್ಟ್ನಲ್ಲಿ ಡಿಸೈನ್ ಲೀಡರ್ ಆಗಿದ್ದಾರೆ. ಮುಂಬೈ ಸ್ಲಮ್ನಲ್ಲಿ ಬೆಳೆದ ಅನುಭವ ಅವರ ಜೀವನಕ್ಕೆ ಯಾವ ಆಕಾರ ನೀಡಿತು ಎಂಬುದನ್ನು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಅವರ ಸ್ಟೋರಿಗೆ ಅನೇಕರು ಪ್ರೇರಣೆಗೊಂಡಿದ್ದಾರೆ.
ಅಂದಹಾಗೆ ಅತ್ತರ್ವಾಲಾ ಅವರಿಗೆ ತನ್ನ ಬದುಕಿನ ಕತೆಯನ್ನು ಬಿಚ್ಚಿಡಲು ಪ್ರೇರಣೆಯಾಗಿದ್ದು ಯಾವುದು ಎಂದು ನೋಡುವುದಾದರೆ, "ಬ್ಯಾಡ್ ಬಾಯ್ ಬಿಲಿಯನೇರ್ಸ್: ಇಂಡಿಯಾ" ಎಂಬ ನೆಟ್ಫ್ಲಿಕ್ಸ್ ಸರಣಿ. ಇದರಲ್ಲಿ ಮುಂಬೈನ ಸ್ಲಮ್ ಒಂದರ ಪಕ್ಷಿ ನೋಟದ ಚಿತ್ರವನ್ನು ಸೆರೆಹಿಡಿಯಲಾಗಿದ್ದು, ಅದರ ಸ್ಕ್ರೀನ್ಶಾಟ್ ಅನ್ನು ಶೇರ್ ಮಾಡಿಕೊಂಡಿರುವ ಅತ್ತರ್ವಾಲಾ ತಮ್ಮ ಬದುಕಿನ ಕತೆಗಳನ್ನು ಮೆಲುಕು ಹಾಕಿದ್ದಾರೆ.
ತನ್ನ ಜೀವನವನ್ನು ರೂಪಿಸಿಕೊಳ್ಳಲು 2015ರಲ್ಲಿ ಏಕಾಂಗಿಯಾಗಿ ಸ್ಲಮ್ನಿಂದ ಹೊರಬರುವ ಮುನ್ನ ಅಲ್ಲಿ ಬೆಳೆದ ಅನುಭವವನ್ನು ಅತ್ತರ್ವಾಲಾ ಹಂಚಿಕೊಂಡಿದ್ದು, ಚಿತ್ರದಲ್ಲಿ ಸೆರೆಯಾಗಿರುವ ಸ್ಲಮ್ನಲ್ಲಿರುವ ಅನೇಕ ಮನೆಗಳಲ್ಲಿ ನಮ್ಮದು ಒಂದು ಎಂದು ಬರೆದುಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ತನ್ನ ಜೀವನಗಾಥೆಯನ್ನು ಅತ್ತರ್ವಾಲಾ ತಿಳಿಸಿದ್ದಾರೆ. ಅವರು ವಾಸವಿದ್ದ ದರ್ಗಾ ಗಲ್ಲಿ ಸ್ಲಮ್ ಬಾಂದ್ರಾ ರೈಲು ನಿಲ್ದಾಣದ ಹತ್ತಿರಲ್ಲಿತ್ತಂತೆ. ಅವರ ತಂದೆ ಅಗತ್ಯ ತೈಲಗಳ ತಿರುಗು ವ್ಯಾಪಾರಿಯಾಗಿದ್ದರು. ಉತ್ತರ ಪ್ರದೇಶದಿಂದ ಮುಂಬೈ ಬಂದು ನೆಲೆಸಿದ್ದರು. ಸ್ಲಮ್ನಲ್ಲಿ ವಾಸವಿದ್ದಷ್ಟು ದಿನ ಕಷ್ಟ ಹಾಗೂ ಜೀವನದ ಅತ್ಯಂತ ಕಠಿಣ ಪರಿಸ್ಥಿತಿಗಳು ಎದುರಾದವು. ಅಲ್ಲದೆ, ಲಿಂಗ ತಾರತಮ್ಯ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಪ್ರಮುಖ ಸಮಸ್ಯೆಯಾಗಿತ್ತು. ಆದರೆ, ಇದೇ ಸ್ಲಮ್ ನನಗೆ ಕಲಿಯಲು ಮತ್ತು ವಿಭಿನ್ನ ಜೀವನವನ್ನು ವಿನ್ಯಾಸಗೊಳಿಸಲು ನನ್ನಲ್ಲಿದ್ದ ಕುತೂಹಲವನ್ನು ಉತ್ತೇಜಿಸಿತು ಎಂದು ಅತ್ತರ್ವಾಲಾ ಹೇಳಿದ್ದಾರೆ.
ಅನೇಕ ಮಹಿಳೆಯರು ಅಸಹಾಯಕರಾಗಿದ್ದಾರೆ ಎಂಬುದು 15ನೇ ವಯಸ್ಸಿನಲ್ಲೇ ತಿಳಿಯಿತು. ಇನ್ನೊಬ್ಬರ ಮೇಲೆ ಅವಲಂಬಿತರಾಗಿದ್ದರು ಮತ್ತು ನಿತ್ಯವು ನಿಂದನೆಗೆ ಒಳಗಾಗುತ್ತಿದ್ದರು. ಅಲ್ಲದೆ, ತಮ್ಮ ಸ್ವಂತ ಆಯ್ಕೆಗಳನ್ನು ಮಾಡಲು ಅಥವಾ ಅವರು ಬಯಸಿದಂತೆ ಆಗುವ ಸ್ವಾತಂತ್ರ್ಯವೂ ಇಲ್ಲದಂತೆ ಜೀವನವನ್ನು ನಡೆಸುತ್ತಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯನ್ನು ನನಗೂ ಎದುರಾಗುತ್ತದೆ ಎಂಬುದನ್ನು ಬಯಸಲು ನನ್ನ ಮನಸ್ಸು ಒಪ್ಪಲಿಲ್ಲ.
ನಾನು ಮೊದಲ ಬಾರಿಗೆ ಶಾಲೆಯಲ್ಲಿ ಕಂಪ್ಯೂಟರ್ ನೋಡಿದೆ. ಅದರತ್ತ ನನ್ನ ಮನಸ್ಸು ಸೆಳೆಯಿತು. ಕಂಪ್ಯೂಟರ್‌ಗಳು ಎಲ್ಲರನ್ನು ಒಂದು ಸ್ಥಾನಕ್ಕೆ ತರುವ ಉತ್ತಮ ಲೆವೆಲರ್ ಆಗಿರಬಹುದು ಎಂದು ನಾನು ನಂಬಿದ್ದೆ. ಅದರ ಮುಂದೆ ಕುಳಿತವರು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ ಅಂತಾ ಅನಿಸಿತು. ಆದಾಗ್ಯೂ, ಅತ್ತರ್ವಾಲಾ ಅವರ ಕಳಪೆ ಶ್ರೇಣಿಗಳು ಅವರನ್ನು ಕಂಪ್ಯೂಟರ್ ತರಗತಿಗಳಿಗೆ ಹಾಜರಾಗುವ ಬದಲು ಸೂಜಿ ಕೆಲಸದ ಕಡೆ ಎಳೆದೊಯ್ಯಿತು. ಇಷ್ಟಕ್ಕೆ ಕುಗ್ಗದ ಅವರು ಸಾಕಷ್ಟು ಬಾರಿ ನಿರಾಕರಣೆಯಾದರೂ ತನ್ನ ಜೀವನದನ್ನು ಟೆಕ್ನಾಲಜಿಯಿಂದಲೇ ಕಟ್ಟಿಕೊಳ್ಳಬೇಕೆಂಬ ಕನಸು ಕಂಡರು.
ಹಣ ಸಾಲ ಮಾಡಿಯಾದರೂ ಸ್ಥಳೀಯ ಕಂಪ್ಯೂಟರ್ ತರಗತಿಗೆ ತನನ್ನು ಸೇರಿಸುವಂತೆ ಅತ್ತರ್ವಾಲಾ ತಂದೆಯನ್ನು ಬಲವಂತ ಮಾಡಿದರು. ಇದಾದ ಬಳಿಕ ತನ್ನ ಸ್ವಂತ ಕಂಪ್ಯೂಟರ್ ಹೊಂದುವ ಆಸೆಯಿಂದ ಅದಕ್ಕೆ ಬೇಕಾಗುವ ಹಣವನ್ನು ಒಟ್ಟುಗೂಡಿಸಲು, ಅವರು ಮಧ್ಯಾಹ್ನದ ಊಟವನ್ನು ಬಿಟ್ಟರು ಅಲ್ಲದೇ ಮನೆಗೆ ನಡೆದುಕೊಂಡೇ ಹಿಂತಿರುಗಲು ಪ್ರಾರಂಭಿಸಿದರು. ಓರ್ವ ಉತ್ತಮ ವಿದ್ಯಾರ್ಥಿನಿಯಾದ ಅವರು ಅಂದಿನಿಂದ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.
ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ ತ್ಯಜಿಸಿದ ಅತ್ತರ್ವಾಲಾ ಕಂಪ್ಯೂಟರ್ ಡಿಸೈನ್ನಿಂದ ತನ್ನ ವೃತ್ತಿ ಜೀವನ ಮುಂದುವರಿಸಲು ಆಸೆಪಟ್ಟರು. ಸಾಕಷ್ಟು ವರ್ಷಗಳವರೆಗೆ ದೃಢಸಂಕಲ್ಪ ಮತ್ತು ಶ್ರಮದೊಂದಿಗೆ ಮುನ್ನೆಡೆದ ಅತ್ತರ್ವಾಲಾ ಮೈಕ್ರೋಸಾಫ್ಟ್ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷವಷ್ಟೇ ಬೆಳಕು, ಗಾಳಿ ಮತ್ತು ಹಸಿರಿನಿಂದ ಕೂಡಿರುವ ಅಪಾರ್ಟ್ಮೆಂಟ್ಗೆ ಅವರ ಕುಟುಂಬ ಸ್ಥಳಾಂತರವಾಗಿದೆ.
ನನ್ನ ತಂದೆ ತಿರುಗುವ ವ್ಯಾಪಾರಿಯಾಗಿರುವುದರಿಂದ ಮತ್ತು ಅಲ್ಲಲ್ಲಿ ರಸ್ತೆಗಳಲ್ಲಿ ಮಲಗಿ ಸಂಪಾದನೆ ಮಾಡಿದ್ದರಿಂದ ನಾವು ಕನಸು ಕಾಣುವ ಜೀವನವನ್ನು ಹೊಂದಿದ್ದೇವೆ. ಅದೃಷ್ಟ, ಕಠಿಣ ಪರಿಶ್ರಮ ಮತ್ತು ಹೋರಾಟಗಳನ್ನು ಆರಿಸುವುದು ಮುಖ್ಯ" ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. ತಮ್ಮಂತೆಯೇ ಸಮಸ್ಯೆಗಳನ್ನು ಎದುರಿಸುತ್ತಿರುವ ಯುವತಿಯರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. "ಶಿಕ್ಷಣ, ಕೌಶಲ್ಯ ಮತ್ತು ವೃತ್ತಿಜೀವನವನ್ನು ಪಡೆಯಲು ಏನು ಬೇಕಾದರೂ ಮಾಡಿ, ಇದು ಯುವತಿಯರಿಗೆ ದೊಡ್ಡ ಗೇಮ್ ಚೇಂಜರ್ ಆಗಲಿದೆ" ಎಂದು ಅವರು ಹೇಳುತ್ತಾರೆ. ಅಲ್ಲದೆ, ತುಂಬಾ ಶ್ರಮವಹಿಸಿ ಒಳ್ಳೆಯ ಜೀವನ ಕಲ್ಪಿಸಿಕೊಟ್ಟ ತಂದೆ-ತಾಯಿಗು ಕೃತಜ್ಞತೆ ಸಲ್ಲಿಸಿದ್ದಾರೆ. ಮದವೆಯಾಗಿರುವ ಅತ್ತರ್ವಾಲಾ ಅವರು ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ. (ಏಜೆನ್ಸೀಸ್)