

ಇಸ್ಲಮಾಬಾದ್: ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನ ಸರ್ಕಾರ ತನ್ನ ಪ್ರಜೆಗಳ ಬಳಿ ಚಹಾ ಕುಡಿಯುವುದನ್ನು ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡಿದೆ. ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರಲು ಪಾಕ್ನ ಯೋಜನಾ ಮಂತ್ರಿ ಅಶಾನ್ ಇಕ್ಬಾಲ್ ಅವರು ಇಂಥದ್ದೊಂದು ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದು, ಅದರಂತೆ ಸರ್ಕಾರ ತನ್ನ ಪ್ರಜೆಗಳ ಬಳಿ ಮನವಿ ಮಾಡಿದೆ.
ಪಾಕಿಸ್ತಾನವು ವಿಶ್ವದಲ್ಲೇ ಅತಿ ಹೆಚ್ಚು ಚಹಾ ಪುಡಿಯನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ. ಕಳೆದ ವರ್ಷ ಪಾಕಿಸ್ತಾನವು ಸುಮಾರು 4,680 ಕೋಟಿ ರೂಪಾಯಿ ಮೌಲ್ಯದ ಚಹಾ ಪುಡಿಯನ್ನು ಆಮದು ಮಾಡಿಕೊಂಡಿದೆ. ಚಹಾ ಪುಡಿಯನ್ನು ಆಮದು ಮಾಡಿಕೊಳ್ಳಲು ಪಾಕ್ ಸಾಲ ಮಾಡಿಕೊಂಡಿತ್ತು ಎಂದು ಸಚಿವರು ತಿಳಿಸಿದ್ದಾರೆ.
ನಾವು ಸಾಲದ ಹಣದಿಂದ ಚಹಾವನ್ನು ಆಮದು ಮಾಡಿಕೊಳ್ಳುವುದರಿಂದ ಚಹಾ ಸೇವನೆಯನ್ನು 1 ರಿಂದ 2 ಕಪ್‌ಗಳಷ್ಟು ಕಡಿಮೆಗೊಳಿಸುವಂತೆ ನಾನು ರಾಷ್ಟ್ರಕ್ಕೆ ಮನವಿ ಮಾಡುತ್ತೇನೆ ಎಂದು ಇಕ್ಬಾಲ್ ಹೇಳಿದ್ದಾರೆ.
ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಕಡಿಮೆಯಾಗುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ಅಗತ್ಯ ವಸ್ತುಗಳನ್ನು ಮಾತ್ರ ಆಮದು ಮಾಡಿಕೊಳ್ಳಬಹುದಾಗಿದೆ. ಹಣದುಬ್ಬರ ಮತ್ತು ಇಂಧನ ಕೊರತೆ ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇಂಧನ ಬಿಕ್ಕಟ್ಟನ್ನು ನೀಗಿಸಲು ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. (ಏಜೆನ್ಸೀಸ್)