

ನವದೆಹಲಿ: ಕಚ್ಚಾ ಬಾದಾಮ್ ಹಾಡಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ಭವನ್ ಬದ್ಯಕರ್ ಅವರ ಪ್ರತಿಭೆಯನ್ನು ಮೆಚ್ಚಿ ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ಮ್ಯಾನೇಜರ್ ಹುದ್ದೆಯನ್ನು ನೀಡಿದೆ ಎಂಬ ಬರಹದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರ ಸತ್ಯಾಸತ್ಯತೆ ಇಲ್ಲಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಬಿಳಿ ಬಣ್ಣದ ಸಮವಸ್ತ್ರ ಧರಿಸಿ, ವಾಕಿ-ಟಾಕಿ ಹಿಡಿದು ರೈಲಿನ ಬಾಗಿಲು ಬಳಿ ನಿಂತು ಬೇರೊಬ್ಬರಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ. ಆ ವ್ಯಕ್ತಿ ನೋಡಲು ಬಹುತೇಕ ಭುವನ್ ಬದ್ಯಕರ್ ಅವರನ್ನೇ ಹೋಲುತ್ತಿದ್ದಾರೆ. ರೈಲು ಚಲಿಸಲು ಆರಂಭವಾಗುತ್ತಿದ್ದಂತೆ ಆ ವ್ಯಕ್ತಿ ವಿಡಿಯೋ ಮಾಡುತ್ತಿದ್ದವನ ಕಡೆ ನೋಡಿ ಒಂದು ನಗೆ ಬೀರುತ್ತಾರೆ. ಇಡೀ ವಿಡಿಯೋದಲ್ಲಿ ಹಿನ್ನೆಲೆಯಲ್ಲಿ ಕಚ್ಚಾ ಬಾದಾಮ್ ಸಾಂಗ್ ಕೇಳಿಬರುತ್ತದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಕಚ್ಚಾ ಬಾದಾಮ್ ಗಾಯಕ ಹೊಸ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಅವರು ರೈಲ್ವೆ ಮ್ಯಾನೇಜರ್ ಆಗಿದ್ದಾರೆ ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಈ ವಿಡಿಯೋ 6 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ಆದರೆ, ಈ ವಿಡಿಯೋ ಅಸಲಿಯತ್ತೇನು ಎಂಬುದನ್ನು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಬಹಿರಂಗಪಡಿಸಿದೆ. ವಿಡಿಯೋದಲ್ಲಿ ಬಿಳಿ ಸಮವಸ್ತ್ರದಲ್ಲಿರುವ ವ್ಯಕ್ತಿ ಕಚ್ಚಾ ಬಾದಾಮ್ ಗಾಯಕ ಭುವನ್ ಬದ್ಯಕರ್ ಅವರಲ್ಲ. ಇದನ್ನು ಭುವನ್ ಮತ್ತು ವಿಡಿಯೋ ರೆಕಾರ್ಡ್ ಮಾಡಿದ ಇಬ್ಬರು ಖಚಿತಪಡಿಸಿದ್ದಾರೆ. ಅಲ್ಲದೆ, ಭಾರತೀಯ ರೈಲ್ವೆ ಇಲಾಖೆ ಭುವನ್ ಅವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಯಾವೊಂದು ನ್ಯೂಸ್ ಸಹ ವರದಿಯಾಗಿಲ್ಲ. ಏಕೆಂದರೆ, ಭುವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿ ಮಾಡಿದ್ದು, ಒಂದು ವೇಳೆ ಕೆಲಸ ಸಿಕ್ಕಿದ್ದೇ ಆಗಿದ್ದಲ್ಲಿ ಇಷ್ಟೊತ್ತಿಗೆ ದೊಡ್ಡ ನ್ಯೂಸ್ ಆಗುತ್ತಿತ್ತು.
ಇಂಡಿಯಾ ಟುಡೆ ವೈರಲ್ ವಿಡಿಯೋವನ್ನು ಭವನ್ ಅವರಿಗೆ ನೇರವಾಗಿ ಕಳುಹಿಸಿ ಸ್ಪಷ್ಟನೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿರುವುದು ನಾನಲ್ಲ ಮತ್ತು ನನಗೆ ಯಾವುದೇ ಉದ್ಯೋಗದ ಆಫರ್ ಬಂದಿಲ್ಲ ಎಂದು ಸ್ವತಃ ಭುವನ್ ಇಂಡಿಯಾ ಟುಡೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ನಾನು ಬರೆಯುವುದರಲ್ಲಿ ಮತ್ತು ತನ್ನದೇ ಹಾಡನ್ನು ರೆಕಾರ್ಡ್ ಮಾಡುವುದರಲ್ಲಿ ಬಿಜಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಅಂದಹಾಗೆ ವೈರಲ್ ವಿಡಿಯೋದಲ್ಲಿ ಇದ್ದ ಡೈಲಿ ಟ್ರಾವೆಲ್ ಹ್ಯಾಕ್ ಎಂಬ ವಾಟರ್ ಮಾರ್ಕ್ ಸಹಾಯದಿಂದ ವಿಡಿಯೋ ಮಾಡಿದ ವ್ಯಕ್ತಿಯನ್ನು ಇಂಡಿಯಾ ಟುಡೆ ಪತ್ತೆಹಚ್ಚಿದೆ. ಡೈಲಿ ಟ್ರಾವೆಲ್ ಹ್ಯಾಕ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಇದೆ. ಈ ಖಾತೆಯನ್ನು ಟ್ರಾವೆಲ್ ವ್ಲಾಗರ್ ಧನಂಜಯ್ ಕುಮಾರ್ ನಡೆಸುತ್ತಿದ್ದಾರೆ. ಇವರು ಬಿಹಾರ ಮೂಲದವರು. ಇವರನ್ನು ಸಂಪರ್ಕಿಸಿ ಇಂಡಿಯಾ ಟುಡೆ ಮಾಹಿತಿ ಪಡೆದುಕೊಂಡಿದೆ.
ಈ ವಿಡಿಯೋವನ್ನು ಕುಮಾರ್ ಅವರು 2021ರ ಅಕ್ಟೋಬರ್ನಲ್ಲಿ ಬಿಹಾರದ ಬರೌನಿ ಜಂಕ್ಸನ್ ರೈಲು ನಿಲ್ದಾಣದಲ್ಲಿ ರೆಕಾರ್ಡ್ ಮಾಡಿದರಂತೆ. ಬಿಳಿ ಸಮವಸ್ತ್ರದಲ್ಲಿರುವ ವ್ಯಕ್ತಿ ಭುವನ್ ಅಲ್ಲ. ಆದರೆ, ನೋಡಲು ಅವರ ರೀತಿ ಇದ್ದಾರಷ್ಟೇ. ವಿಡಿಯೋದಲ್ಲಿರುವುದು ಅಗರ್ತಲ-ಆನಂದ್ ವಿಹಾರ್ ತೇಜಸ್ ರಾಜಧಾನಿ ಎಕ್ಸ್ಪ್ರೆಸ್ ರೈಲು ಎಂದು ಕುಮಾರ್ ಹೇಳಿದ್ದಾರೆ.
ಕುಮಾರ್ ಹೇಳಿದ ಮಾಹಿತಿಯಿಂದ ವಿಡಿಯೋ ನೆರವಿನಿಂದ ಬರೌನಿ ರೈಲ್ವೆ ಜಂಕ್ಸನ್ ನಿಲ್ದಾಣದ ಸಿಬ್ಬಂದಿ ವರ್ಗವನ್ನು ಇಂಡಿಯಾ ಟುಡೆ ಸಂಪರ್ಕಿಸಿದೆ. ಈ ವೇಳೆ ಅಲ್ಲಿನ ಸಿಬ್ಬಂದಿ ಮನೋಜ್ ಎಂಬುವರ ಪ್ರಕಾರ ವಿಡಿಯೋದಲ್ಲಿ ಇರುವುದು ಕೆ.ಕೆ. ಮರ್ಮು ಎಂಬುವರು. ಇವರು ಆಗಾಗ ಉತ್ತರ ಪ್ರದೇಶ-ಬಿಹಾರ ರೈಲಿನಲ್ಲಿ ಟ್ರಾವೆಲ್ ಮಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.
ಅಲ್ಲಿಗೆ ತಿಳಿಯುವುದೇನೆಂದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವಂತೆ ವಿಡಿಯೋದಲ್ಲಿರುವ ವ್ಯಕ್ತಿಗೂ ಭುವನ್ ಬದ್ಯಕರ್ ಅವರಿಗೆ ಸಂಬಂಧವಿಲ್ಲ. ಅಲ್ಲದೆ, ಭುವನ್ ಅವರಿಗೆ ಯಾವುದೇ ಉದ್ಯೋಗವೂ ದೊರಕಿಲ್ಲ ಎಂಬುದು ಸ್ಪಷ್ಟವಾಗುತ್ತದೆ. (ಏಜೆನ್ಸೀಸ್)