

ಪಣಜಿ: ಮಳೆಗಾಲವು ಜಲಪಾತಗಳ ಸೌಂದರ್ಯವನ್ನು ನಯನ ಮನೋಹರವಾಗಿಸುತ್ತಿದೆ. ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಜೋಗ ಜಲಪಾತದಿಂದ ಹಿಡಿದು ಸಣ್ಣ ಸಣ್ಣ ತೊರೆಗಳು ಸಹ ಧುಮಿಕ್ಕಿ ಹರಿಯುತ್ತಿದೆ.
ಕೆಲವು ದಿನಗಳ ಹಿಂದೆ ವಿಶ್ವ ವಿಖ್ಯಾತ ಜೋಗ ಜಲಪಾತದ ವಿಡಿಯೋ ವೈರಲ್ ಆಗಿತ್ತು. ಇದೀಗ ಗೋವಾದ ಅತ್ಯಾಕರ್ಷಕ ದೂಧ್ ಸಾಗರ್ ಜಲಪಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಮನ ಗೆಲ್ಲುತ್ತಿದೆ.
ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯದ ನೈಸರ್ಗಿಕ ಸೌಂದರ್ಯದ ನಡುವೆ ದೂಧ್ ಸಾಗರ್ ನೆಲೆಗೊಂಡಿದೆ. ಇದನ್ನು ಸ್ಥಳೀಯವಾಗಿ 'ಹಾಲಿನ ಸಮುದ್ರ' ಎಂದು ಕರೆಯಲಾಗುತ್ತದೆ. ಇದು ಮಾಂಡೋವಿ ನದಿಯಿಂದ ರೂಪುಗೊಂಡಿದೆ ಮತ್ತು ಮೊದಲು 1017 ಅಡಿ ಎತ್ತರದಲ್ಲಿ ಪಶ್ಚಿಮ ಘಟ್ಟಗಳ ಪರ್ವತಗಳ ಮೇಲೆ ಹರಿಯುತ್ತದೆ. ನಾಲ್ಕು ಹೊಳೆಗಳಾಗಿ ವಿಭಜಿಸುತ್ತದೆ.
ರಾಜಕಾರಣಿ ಕಿಶನ್ ರೆಡ್ಡಿ ಗಂಗಾಪುರಂ ಅವರು ಕೂ ಆ್ಯಪ್ನಲ್ಲಿ ದೂಧ್ ಸಾಗರ್ ಜಲಪಾತದ ವೀಡಿಯೊವನ್ನು ಹಂಚಿಕೊಂಡಿದ್ದು, ಹೆವೆನ್ ಮೀಟ್ಸ್ ಅರ್ಥ್! ದೂಧಸಾಗರ್ ಜಲಪಾತ, ಗೋವಾ ಎಂದು ಹೇಳಿದ್ದಾರೆ.
ಕರ್ನಾಟಕದ ಗೋವಾ ಮತ್ತು ಬೆಳಗಾವಿ ನಡುವಿನ ರೈಲು ಮಾರ್ಗದಲ್ಲಿ ನೆಲೆಗೊಂಡಿರುವ ಇದು ದೇಶದ ಅತ್ಯಂತ ಸುಂದರವಾದ ರಮಣೀಯ ತಾಣಗಳಲ್ಲಿ ಒಂದಾಗಿದೆ.