

ನವದೆಹಲಿ: ಕಿರಾಣಿ ಅಂಗಡಿಯವರು, ರಿಕ್ಷಾ ಓಡಿಸುವವರು ಹಾಗೂ ಕಾರು ಚಾಲಕರು ಸೇರಿದಂತೆ ಹಲವರನ್ನು ಭಯ್ಯಾ (ಅಣ್ಣ) ಅಥವಾ ಅಂಕಲ್ ಎಂದು ಕರೆಯುವುದು ಭಾರತದಲ್ಲಿ ತುಂಬಾ ಸಾಮಾನ್ಯ. ಇದು ರೂಢಿಗತವಾಗಿ ಬಂದಿದೆ. ನೀವು ಏಕೆ ಈ ರೀತಿ ಕರೆಯುತ್ತೀರಾ ಎಂದು ಕೇಳಿದರೆ, ಹಿಂದಿನಿಂದಲೂ ಹೀಗೆ ಕರೆಯುತ್ತಿದ್ದಾರೆ. ಹೀಗಾಗಿ ನಾವು ಕೂಡ ಕರೆಯುತ್ತೇವೆ ಎನ್ನುತ್ತಾರೆ. ಆದರೆ, ಈ ರೀತಿ ಕರೆಯಿಸಿಕೊಳ್ಳುವುದು ಬಹುತೇಕರಿಗೆ ಇಷ್ಟವಿರುವುದಿಲ್ಲ. ಅನೇಕ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿರುವವರನ್ನು ನಾವು ನೋಡಿದ್ದೇವೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಕಾರು ಚಾಲಕನೊಬ್ಬ ಮಾಡಿರುವ ತಮಾಷೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನ ಹೆಸರನ್ನು ಹೊರತುಪಡಿಸಿ ಬೇರೆ ಏನನ್ನು ಕರೆಯಬೇಡಿ ಎಂದು ಕಾರು ಚಾಲಕನೊಬ್ಬ ತನ್ನ ಪ್ರಯಾಣಿಕರನ್ನು ಮನವಿ ಮಾಡಿಕೊಂಡಿದ್ದಾನೆ. ಸೋಹಿನಿ ಎಂ ಹೆಸರಿನ ಟ್ವಿಟರ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಲಾಗಿದ್ದು, ಫೋಟೋದಲ್ಲಿರುವ ಕಾರಿನ ಒಳಾಂಗಣ ದೃಶ್ಯದಲ್ಲಿ ಮುಂಭಾಗದ ಸೀಟಿನ ಹಿಂಬದಿಯಲ್ಲಿ "ನನ್ನನ್ನು ಭಯ್ಯಾ (ಅಣ್ಣ) ಅಥವಾ ಅಂಕಲ್ ಎಂದು ಕರೆಯಬೇಡಿ" ಎಂದು ಬರೆಸಿದ್ದಾನೆ.
ಚಾಲಕನು ತನ್ನ ಹೆಸರನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಕರೆಯಬೇಡಿ ಎಂದು ಪ್ರಯಾಣಿಕರಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಇದೀಗ ಸೋಹಾನಿ ಅವರು ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಾಲಕನ ಹಾಸ್ಯಪ್ರಜ್ಞೆಗೆ ಬಹುಪರಾಕ್ ಎಂದಿದ್ದಾರೆ. ಫೋಟೋ ನೋಡಿದವರು ತಮ್ಮದೇ ರೀತಿಯಲ್ಲಿ ಕಾಮೆಂಟ್ಗಳ ಸುರಿಮಳೆಗೈಯ್ಯುತ್ತಿದ್ದಾರೆ. ಈ ಫೋಟೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ...(ಏಜೆನ್ಸೀಸ್)