

ನವದೆಹಲಿ: ಕರ್ತವ್ಯದಲ್ಲಿರುವಾಗಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಬ್ಬರು ಪೊಲೀಸ್ ಸಿಬ್ಬಂದಿಗೆ ಇಲಾಖೆ ಶೋಕಾಸ್ ನೋಟಿಸ್ ಹೊರಡಿಸಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಾಯುವ್ಯ ದೆಹಲಿಯ ಡಿಸಿಪಿ ಉಷಾ ರಂಗ್ನಾ, ವಿಡಿಯೋವನ್ನು ಮಾಡೆಲ್ ಟೌನ್ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್ಟೇಬಲ್ ಶಶಿ ಮತ್ತು ಕಾನ್ಸ್ಟೇಬಲ್ ವಿವೇಕ್ ಮಥೂರ್ ಕರ್ತವ್ಯದಲ್ಲಿರುವಾಗಲೇ ಮಾಡಿದ್ದಾರೆಂದು ಮಾಹಿತಿ ನೀಡಿದರು. ಇದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕರೊನಾ ಲಾಕ್ಡೌನ್ ಸಮಯದಲ್ಲಿ ಈ ವಿಡಿಯೋವನ್ನು ಮಾಡಲಾಗಿದೆ. ಕರ್ತವ್ಯದಲ್ಲಿರುವಾಗ ಅದರಲ್ಲೂ ಯೂನಿಫಾರ್ಮ್ ಧರಿಸಿ ವಿಡಿಯೋ ಮಾಡಿರುವುದು ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ವಿಡಿಯೋದಲ್ಲಿರುವ ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಇಬ್ಬರು ಸಿಬ್ಬಂದಿಯು ಕರೊನಾ ನಿಯಮವನ್ನು ಉಲ್ಲಂಘಿಸಿರುವುದರ ಜತೆಗೆ ಕರ್ತವ್ಯದಲ್ಲಿ ಇರುವಾಗಲೇ ಬೇಜವಬ್ದಾರಿ ಮೆರೆದಿದ್ದಾರೆ. ನೋಟಿಸ್ ನೀಡಲಾಗಿದ್ದು, 15 ದಿನಗಳ ಒಳಗೆ ಸರಿಯಾದ ಉತ್ತರ ನೀಡಬೇಕು. ಇಲ್ಲವಾದಲ್ಲಿ ಕಠಿಣ ಶಿಸ್ತುಕ್ರಮ ಜರುಗಿಸುವುದಾಗಿ ಡಿಸಿಪಿ ಉಷಾ ರಂಗ್ನಾ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)