

ನವದೆಹಲಿ: ಕರೊನಾ ಸಾಂಕ್ರಮಿಕವು ಇನ್ನು ಅಂತ್ಯಗೊಂಡಿಲ್ಲ ಮತ್ತು ಅಂತ್ಯಗೊಳ್ಳುವ ಹತ್ತಿರದಲ್ಲಿಯೂ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ)ಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಂಗಳವಾರ ಎಚ್ಚರಿಸಿದ್ದಾರೆ.
ಕೆಲವು ದೇಶಗಳಲ್ಲಿ ಕಡಿಮೆ ಲಸಿಕೀಕರಣ ಕುರಿತು ಕಾಳಜಿ ವ್ಯಕ್ತಪಡಿಸಿರುವ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಕರೊನಾ ರೂಪಾಂತರಿ ಒಮಿಕ್ರಾನ್ ವೇಗದ ಹರಡುವಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇಡೀ ವಿಶ್ವವನ್ನು ಗುಡಿಸಿ ಗುಂಡಾಂತರ ಮಾಡುವುದನ್ನು ಒಮಿಕ್ರಾನ್ ಮುಂದುವರಿಸಿದೆ. ಕಡಿಮೆ ಲಸಿಕೀಕರಣ ಹೊಂದಿರುವ ದೇಶಗಳ ಮೇಲೆ ಕಳವಳ ವ್ಯಕ್ತವಾಗಿದೆ. ಲಸಿಕೆ ಪಡೆಯದ ಜನರಲ್ಲಿ ಗಂಭೀರವಾದ ಅನಾರೋಗ್ಯ ಮತ್ತು ಸಾವಿನ ಅಪಾಯದ ಪ್ರಮಾಣ ಹೆಚ್ಚಾಗಿರುತ್ತದೆ ಎಂದಿದ್ದಾರೆ.
ಸೋಂಕಿನ ಅಪಾಯವನ್ನು ತಗ್ಗಿಸುವಲ್ಲಿ ನಿಮ್ಮ ಪ್ರಯತ್ನವೂ ಇರಬೇಕೆಂದು ಜನರನ್ನು ಕೋರಿರುವ ಘೆಬ್ರೆಯೆಸಸ್ ಅವರು ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಮನವಿ ಮಾಡಿದ್ದಾರೆ.
ಒಮಿಕ್ರಾನ್ ಸೋಂಕು ಸೌಮ್ಯ ಸ್ವಭಾವದ್ದು ಅಂತಾ ಕೆಲವರು ಅಂದುಕೊಂಡಿದ್ದಾರೆ. ಆದರೆ, ಇದು ಸೌಮ್ಯ ಸ್ವಭಾವದ್ದಲ್ಲ. ಇದು ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ತೀವ್ರ ವೇಗವಾಗಿ ಕಾಡ್ಗಿಚ್ಚಿನಂತೆ ಇಡೀ ವಿಶ್ವವನ್ನೇ ಆವರಿಸುತ್ತಿದೆ. ಈ ಹೊಸ ರೂಪಾಂತರವು ಹಿಂದಿನ ತಳಿಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಆದರೆ, ಕಡಿಮೆ ಗಂಭೀರವಾದ ರೋಗವನ್ನು ಉಂಟುಮಾಡುತ್ತದೆ. ಆದರೂ, ಇದನ್ನು ನಿರ್ಲಕ್ಷಿಸುವಂತಿಲ್ಲ. ಈಗಲೇ ಬಿಟ್ಟುಕೊಡುವುದು ಸರಿಯಿಲ್ಲ. ಇನ್ನು ಸಾಂಕ್ರಮಿಕ ಅಂತ್ಯವಾಗಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)