ಗಡಿಯಲ್ಲಿ ಗಸ್ತು ಚಟುವಟಿಕೆ ಹೆಚ್ಚಿಸಿದ ಚೀನಾದಿಂದ ಆತಂಕಕಾರಿ ನಡೆ: ಪ್ರತ್ಯುತ್ತರ ನೀಡಲು ಭಾರತೀಯ ಸೇನೆ ಸಿದ್ಧ

China
Published on

ನವದೆಹಲಿ: ಪೂರ್ವ ಲಡಾಖ್​ ಗಡಿಯಲ್ಲಿ ಚೀನಾದ ಉಪಟಳ ಹೆಚ್ಚಾಗುತ್ತಿದೆ. ಗಡಿಯಲ್ಲಿ ತನ್ನ ಗಸ್ತು ಚಟುವಟಿಕೆಯನ್ನು ಹೆಚ್ಚಿಸಿರುವ ಚೀನಾ, ವಾರ್ಷಿಕ ಸಮರಾಭ್ಯಾಸ ಮಾಡುತ್ತಿರುವುದು ಕಳವಳಕಾರಿಯಾಗಿದೆ ಎಂದು ಪೂರ್ವ ಸೇನಾ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಮನೋಜ್​ ಪಾಂಡೆ ಹೇಳಿದ್ದಾರೆ.

ಚೀನಾ ಸಂಯೋಜಿತ ಜಂಟಿ ಸಮಾರಾಭ್ಯಸಗಳನ್ನು ನಡೆಸುತ್ತಿದೆ. ತಮ್ಮ ಸೇನಾ ಪಡೆಗಳ ಜತೆಗೆ ಅನೇಕ ಸಲಕರಣೆಗಳನ್ನು ಜತೆಗೆ ತರುತ್ತಿದ್ದಾರೆ. ಈ ವರ್ಷ ತಮ್ಮ ಉಪಟಳವನ್ನು ಹೆಚ್ಚಿಸಿರುವು ಚೀನಾ, ಅದನ್ನು ಹಾಗೇ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಪಾಂಡೆ ತಿಳಿಸಿದರು.

ಕೆಲವು ಪ್ರದೇಶಗಳಲ್ಲಿ ಪೀಪಲ್​ ಲಿಬರೇಷನ್​ ಆರ್ಮಿಯ ಗಸ್ತು ಚಟುವಟಿಕೆ ಹೆಚ್ಚಾಗಿದೆ. ಆದರೆ, ಗಸ್ತಿನಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ನಾವು ಗಮನಿಸಿಲ್ಲ. ಆಳವಾದ ಮತ್ತು ಪ್ರಮುಖವಾದ ಸ್ಥಳಗಳಲ್ಲಿ ವಾರ್ಷಿಕ ಸಮರಾಭ್ಯಾಸವನ್ನು ಚೀನಾ ಹೆಚ್ಚಿಸಿದೆ. ಕಳೆದು ಒಂದು ವರ್ಷದಿಂದ ಚೀನಾ-ಭಾರತ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ನಮಗೆ ತುಂಬಾ ಕಳವಳಕಾರಿಯಾಗಿದೆ. ಪೂರ್ವ ಸೇನೆ ಕೂಡ ತನ್ನ ತಯಾರಿಯನ್ನು ಇನ್ನಷ್ಟು ವೃದ್ಧಿಸಿದ್ದು, ಯಾವುದೇ ಸಂದರ್ಭದಲ್ಲೂ ಸಮರ್ಥ ಪ್ರತಿಕ್ರಿಯೆ ನೀಡಲು ಸಿದ್ಧವಾಗಿದೆ ಎಂದು ಪಾಂಡೆ ಅವರು ಹೇಳಿದರು.

ವಾಸ್ತವ ಗಡಿ ರೇಖೆ (ಎಲ್​ಎಸಿ)ಯ ಬಳಿಯೂ ಚೀನಾ ತನ್ನ ಚಟುವಟಿಕೆಯನ್ನು ಹೆಚ್ಚು ಮಾಡಿದೆ. ಅಲ್ಲದೆ, ಅನೇಕ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡುತ್ತಿರುವುದು ಕೂಡ ಭಾರತ ಪಾಲಿಗೆ ಕೊಂಚ ಸಮಸ್ಯೆ ಆಗುವ ಲಕ್ಷಣಗಳು ಕಾಣುತ್ತಿವೆ. ಸದ್ಯ ಗಡಿಯಲ್ಲಿ ಕಣ್ಗಾವಲು ಪಡೆ ಗಸ್ತಿನಲ್ಲಿದ್ದು, ಸಂಭವನೀಯ ಯಾವುದೇ ಸಮಸ್ಯೆಯನ್ನು ಎದುರಿಸಲು ನಾವು ಸಾಕಷ್ಟು ಬಲವನ್ನು ಹೊಂದಿದ್ದೇವೆ ಎಂದು ಆರ್ಮಿ ಕಮಾಂಡರ್​ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net