

ಬೀಜಿಂಗ್: ಕಳೆದ ಮಾರ್ಚ್ ತಿಂಗಳಲ್ಲಿ ಚೀನಾದಲ್ಲಿ ದುರಂತ ಘಟನೆಯೊಂದು ಸಂಭವಿಸಿರು. ಸಿಬ್ಬಂದಿ ಸೇರಿದಂತೆ 132 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ದಕ್ಷಿಣ ಚೀನಾದಲ್ಲಿ ಪತನಗೊಂಡು ಎಲ್ಲರು ಸಾವಿಗೀಡಾಗಿದ್ದರು. ಈ ಘಟನೆಯ ಬಗ್ಗೆ ಇದೀಗ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಉದ್ದೇಶಪೂರ್ವಕವಾಗಿಯೇ ನಡೆದ ದುಷ್ಕೃತ್ಯ ಎಂದು ಹೇಳಲಾಗಿದೆ.
ಪತನವಾದ ವಿಮಾನದಲ್ಲಿ ದೊರೆತ ಬ್ಲಾಕ್ ಬಾಕ್ಸ್ನಿಂದ ಸಂಗ್ರಹಿಸಲಾದ ಡೇಟಾ ಪ್ರಕಾರ, ಕಾಕ್ಪಿಟ್ನಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನ ಮಾಡಿರುವುದು ಬೆಳಕಿಗೆ ಬಂದಿದೆ.
ಚೀನಾ ಈಸ್ಟರ್ನ್ ಏರ್ಲೈನ್ಸ್ಗೆ ಸೇರಿದ ಬೋಯಿಂಗ್ ಜೆಟ್ 737-800 ವಿಮಾನವು ಗುವಾಂಗ್ಸಿ ಪ್ರದೇಶದಲ್ಲಿ ಮಾರ್ಚ್ 21ರಂದು ಪತನವಾಗಿತ್ತು. ವಿಮಾನವು 132 ಪ್ಯಾಸೇಂಜರ್ನ ಹೊತ್ತುಕೊಂಡು ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ತೆರಳುತ್ತಿತ್ತು. ಫ್ಲೈಟ್ರಾಡರ್ ಡೇಟಾ ಪ್ರಕಾರ ಪತನಗೊಂಡ ಸಮಯದಲ್ಲಿ ವಿಮಾನವು ಗಂಟೆಗೆ 700 ಕಿ.ಮೀ ವೇಗದಲ್ಲಿ 29 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು.
ಮಾರ್ಚ್ 21ರಂದು ಮಧ್ಯಾಹ್ನ 1.11ಕ್ಕೆ ಟೇಕಾಫ್ ಆದ ವಿಮಾನ ಮಧ್ಯಾಹ್ನ 3.05ರ ಸುಮಾರಿಗೆ ಮಾರ್ಗಮಧ್ಯೆ ಗುವಾಂಗ್ಸಿ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕೆಳಮುಖವಾಗಿ ಕುಸಿದು ಪತನಗೊಂಡಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಿಕ್ಕಾಪಟ್ಟೆ ವೈರಲ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಯಾಯಿತು. 28 ವರ್ಷದಲ್ಲಿ ಚೀನಾದಲ್ಲಿ ನಡೆದ ಅತ್ಯಂತ ಅಪಾಯಕಾರಿ ವಿಮಾನ ಪತನ ಇದಾಗಿದೆ.
ಘಟನೆ ನಡೆದ ಎರಡು ತಿಂಗಳ ಬಳಿಕ ವಿಮಾನದಲ್ಲಿ ದೊರೆತ ಬ್ಲಾಕ್ಬಾಕ್ಸ್ ಡೇಟಾವನ್ನು ಅಮೆರಿಕ ಅಧಿಕಾರಿಗಳು ವಿಶ್ಲೇಷಣೆ ಮಾಡಿದ್ದು, ಕಾಕ್ಪಿಟ್ನಿಂದ ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನ ಮಾಡಲಾಗಿದೆ ಎಂದು ಹೇಳಿದ್ದಾರೆ. ವಿಮಾನ ದಿಢೀರನೇ ಕುಸಿಯುವ ಸಮಯದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರರ್ಗಳು ಮತ್ತು ಹತ್ತಿರದ ವಿಮಾನಗಳಿಂದ ಪದೇ ಪದೇ ಕರೆ ಮಾಡಿದರೂ ಪೈಲಟ್‌ಗಳು ಸ್ಪಂದಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಸ್ನ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಅಧ್ಯಕ್ಷೆ, ಜೆನ್ನಿಫರ್ ಹೋಮೆಂಡಿ ಮಾತನಾಡಿ, ನಮ್ಮ ಮಂಡಳಿಯ ತನಿಖಾಧಿಕಾರಿಗಳು ಮತ್ತು ಬೋಯಿಂಗ್ ಸಂಸ್ಥೆ, ಚೀನಾದ ವಿಮಾನ ತನಿಖೆಗೆ ಸಹಾಯ ಮಾಡಲು ಚೀನಾಕ್ಕೆ ಪ್ರಯಾಣಿಸಿದ್ದರು. ಈ ವೇಳೆ ಯಾವುದೇ ತುರ್ತು ಕ್ರಮದ ಅಗತ್ಯವಿರುವ ಯಾವುದೇ ಸಮಸ್ಯೆಗಳು ವಿಮಾನದಲ್ಲಿ ಇರಲಿಲ್ಲ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ.
ಅಪಘಾತದ ತನಿಖೆಗೆ ತಾನು ಜವಾಬ್ದಾರನಲ್ಲ ಎಂದು ಚೀನಾದ ಈಸ್ಟರ್ನ್ ಏರ್‌ಲೈನ್ ಈಗಾಗಲೇ ಹೇಳಿಕೊಂಡಿದೆ ಮತ್ತು ಏಪ್ರಿಲ್ 20ರಂದು ಬಿಡುಗಡೆಯಾದ ತನ್ನ ಪ್ರಾಥಮಿಕ ವರದಿಯಲ್ಲಿ ಚೀನಾ ಸರ್ಕಾರದ ಸಾರಾಂಶವನ್ನು ವರದಿಯಲ್ಲಿ ಉಲ್ಲೇಖಿಸಿದೆ. ಹಾನಿಗೊಳಗಾದ ಬ್ಲಾಕ್ಬಾಕ್ಸ್ ಡೇಟಾದ ಮರುಸ್ಥಾಪನೆ ಮತ್ತು ವಿಶ್ಲೇಷಣೆ ಇನ್ನೂ ಪ್ರಗತಿಯಲ್ಲಿದೆ ಎಂದು ವರದಿಯಲ್ಲಿ ತಿಳಿಸಿದೆ.
ಚೀನಾ ಈಸ್ಟರ್ನ್ ಪ್ರಕಾರ, ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ಉತ್ತಮ ಆರೋಗ್ಯ ಹೊಂದಿದ್ದರು ಮತ್ತು ಯಾವುದೇ ಹಣಕಾಸಿನ ಅಥವಾ ಕೌಟುಂಬಿಕ ಸಮಸ್ಯೆಗಳಿರಲಿಲ್ಲ. ವಿಮಾನದಿಂದ ಯಾವುದೇ ತುರ್ತು ಸಂಕೇತವನ್ನು ಕಳುಹಿಸಲಾಗಿಲ್ಲ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ, ಕಾಕ್‌ಪಿಟ್ ಭದ್ರತೆಯನ್ನು ಉಲ್ಲಂಘಿಸಿರುವ ಸಾಧ್ಯತೆಯಿಲ್ಲ ಎಂದು ಚೀನಾ ಈಸ್ಟರ್ನ್ ಹೇಳಿದೆ. ಆದರೆ, ಇದೀಗ ಅಮೆರಿಕ ಬಿಡಗಡೆ ಮಾಡಿರುವ ವರದಿ ಇದಕ್ಕೆ ತದ್ವಿರುದ್ಧವಾಗಿದೆ. ಉದ್ದೇಶಪೂರ್ವಕವಾಗಿಯೇ ವಿಮಾನ ಪತನ ಮಾಡಲಾಗಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್)