

ನವದೆಹಲಿ: ಕಾಲಿನಿಂದ ಒದ್ದು, ಬಾಲ ಹಿಡಿದು ಎಳೆದಾಡಿದ ವ್ಯಕ್ತಿಯೊಬ್ಬನ ಮೇಲೆ ಎಗರಿದ ಹಸು, ಆತನನ್ನು ಹಿಗ್ಗಾಮುಗ್ಗಾ ತುಳಿದು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಘರ್ಕೆ ಕಲೇಶ್ (@gharkekalesh) ಎಂಬುವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಈವರೆಗೂ 74 ಸಾವಿರಕ್ಕೂ ಅಧಿಕ ವೀಕ್ಷಣೆ ಮತ್ತು 3 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ನೀಲಿ ಬಣ್ಣ ಟೀ ಶರ್ಟ್ ಧರಿಸಿರುವ ವ್ಯಕ್ತಿ ಹಸುವಿನ ಕಾಲಿ ಕಟ್ಟಿದ ಹಗ್ಗವನ್ನು ಹಿಡಿದು ಎಳೆಯುತ್ತಾನೆ. ಬಳಿಕ ಕರುಣೆಯಿಲ್ಲದೆ, ಕಾಲಿನಿಂದ ಹಸುವಿನ ಹಿಂಭಾಗಕ್ಕೆ ಒದೆಯುತ್ತಾನೆ ಮತ್ತು ಬಾಲ ಹಿಡಿದುಕೊಂಡು ಎಳೆದಾಡುವುದಲ್ಲದೆ, ಬಾಲವನ್ನು ನುಲಿಯುತ್ತಾನೆ. ಇದರಿಂದ ಸಿಟ್ಟಿಗೇಳುವ ಹಸು, ಆತನ ವಿರುದ್ಧ ತಿರುಗಿ ಬೀಳುತ್ತದೆ. ಆತನನ್ನು ಕೆಳಗಡೆ ನೂಕಿ ಹಿಗ್ಗಾಮುಗ್ಗಾ ತುಳಿಯುತ್ತದೆ. ಈ ವೇಳೆ ಅಲ್ಲಿಯೇ ನೋಡುತ್ತಾ ನಿಂತಿದ್ದ ಜನರು ದಿಕ್ಕಾಪಾಲಾಗುತ್ತಾರೆ.
ಆರಂಭದಲ್ಲಿ ಹಸು ತುಂಬಾ ತಾಳ್ಮೆಯಿಂದಲೇ ಇರುತ್ತದೆ. ಕರುಣೆ ತೋರದ ವ್ಯಕ್ತಿ, ಯಾವಾಗ ಬಾಲ ಹಿಡಿದು ನುಲಿಯುತ್ತಾನೋ ಆಗ ಕೆರಳುವ ಹಸು, ಆತನ ವಿರುದ್ಧ ತಿರುಗಿಬಿದ್ದು, ಕೊಂಬಿನಿಂದ ಗುಮ್ಮಿ, ಕೆಳಗೆ ಬೀಳಿಸಿ, ತುಳಿದು ಹಾಕುತ್ತದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಆ ಜೀವಿಯ ಜೊತೆ ಕರುಣೆ ಇಲ್ಲದೆ ನಡೆದುಕೊಂಡ ಆ ವ್ಯಕ್ತಿಯದ್ದೇ ತಪ್ಪು ಎಂದು ಬೊಟ್ಟು ಮಾಡಿದ್ದಾರೆ.
ಒಳ್ಳೆಯದು. ಆತ ಅದಕ್ಕೆ ಅರ್ಹ. ದೇವರು ಸೃಷ್ಟಿಸಿದ ಸುಂದರವಾದ ಜೀವಿಗಳನ್ನು ನಿಮ್ಮ ಕೈಯಲ್ಲಿ ಗೌರವಿಸಲು ಸಾಧ್ಯವಾಗದಿದ್ದರೆ, ಅವು ಕೂಡ ನಿಮ್ಮನ್ನು ಗೌರವಿಸುವುದಿಲ್ಲ ಎಂದು ನೆಟ್ಟಿಗನೊಬ್ಬ ಕಮೆಂಟಿಸಿದ್ದಾರೆ. ಇದು ತಕ್ಷಣದ ಕರ್ಮ ಎಂದು ಮತ್ತೊಬ್ಬ ನೆಟ್ಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)