22 ವರ್ಷದ ಪ್ರೇಯಸಿಗೆ ಕಾರ್​ ಗಿಫ್ಟ್​ ಮಾಡಲು ಪತ್ನಿಯ ಚಿನ್ನಾಭರಣ ಕದ್ದ 44 ವರ್ಷದ ವ್ಯಕ್ತಿಗೆ ಕಾದಿತ್ತು ಶಾಕ್​!

Theft
Published on

ಚೆನ್ನೈ: ಗರ್ಲ್​ಫ್ರೆಂಡ್​ಗೆ ಉಡುಗೊರೆ ಕೊಡಲು ತನ್ನ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದ 40 ವರ್ಷದ ವ್ಯಕ್ತಿಯನ್ನು ಚೆನ್ನೈ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.

ಬಂಧಿತ ಆರೋಪಿಯನ್ನು ಶೇಖರ್​ ಎಂದು ಗುರುತಿಸಲಾಗಿದೆ. ಆತನ 22 ವರ್ಷದ ಪ್ರೇಯಸಿ ಸ್ವಾತಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದು ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ.

ವಿವರಣೆಗೆ ಬರುವುದಾದರೆ, ಆರೋಪಿ ಶೇಖರ್​ ಚೆನ್ನೈನಲ್ಲಿರುವ ಪೂನಮಲ್ಲಿ ಏರಿಯಾದಲ್ಲಿರುವ ತಾಯಿ ಮತ್ತು ಸಹೋದರ ರಾಜೇಶ್​ ಕುಟುಂಬದ ಜೊತೆಗೆ ವಾಸವಾಗಿದ್ದಾನೆ. ಕೆಲವು ಭಿನ್ನಭಿಪ್ರಾಯಗಳಿಂದಾಗಿ ಎರಡು ವರ್ಷಗಳ ಹಿಂದೆ ಶೇಖರ್​ ಪತ್ನಿ ಮಲ್ಲಿಕಾ ಮನೆ ಬಿಟ್ಟು ಹೋಗಿದ್ದಳು. ತನ್ನ ಒಡವೆ ತೆಗೆದುಕೊಳ್ಳಲೆಂದು ಮಲ್ಲಿಕಾ ಇತ್ತೀಚೆಗೆ ಗಂಡನ ಮನೆಗೆ ಮರಳಿದ್ದಳು. ಆದರೆ, ಬೀರು ನೋಡಿ ಮಲ್ಲಿಕಾ ಶಾಕ್ ಆದಳು. ಏಕೆಂದರೆ, ಅಲ್ಲಿ ಯಾವುದೇ ಚಿನ್ನಾಭರಣ ಇರಲಿಲ್ಲ.

ಇದಾದ ಬಳಿಕ ಮಲ್ಲಿಕಾ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು. ತನಿಖೆ ಆರಂಭಿಸಿದ ಪೊಲೀಸರಿಗೆ ಕಳ್ಳ ಬೇರೆ ಯಾರು ಇಲ್ಲ. ಮನೆಯಲ್ಲಿರುವ ಶೇಖರ್​ ಎಂಬುದು ಗೊತ್ತಾಯಿತು. ವಿಚಾರಣೆ ನಡೆಸಿದಾಗ ಶೇಖರ್​ ಸಹ ತಪ್ಪೊಪ್ಪಿಕೊಂಡಿದ್ದು, ಮನೆಯಲ್ಲಿದ್ದ ಪತ್ನಿಯ 300 ಸವರನ್​ ಮತ್ತು ತನ್ನ ತಾಯಿಯ 200 ಸವರನ್ ಚಿನ್ನವನ್ನು ಕದ್ದಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಕದ್ದ ಚಿನ್ನವನ್ನು ಆರೋಪಿ ಶೇಖರ್​ ತನ್ನ ಪ್ರೇಯಸಿ ಸ್ವಾತಿಗೆ ಉಡುಗೊರೆಯಾಗಿ ನೀಡಿದ್ದಾನೆ. ಅಲ್ಲದೆ, ಕದ್ದ ಚಿನ್ನದಲ್ಲಿ ಒಂದಿಷ್ಟು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಆಕೆಗಾಗಿ ಕಾರನ್ನು ಸಹ ಶೇಖರ್ ಕೊಂಡು ತಂದಿದ್ದ. ಇದೀಗ ಇಬ್ಬರು ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ. ಮತ್ತಷ್ಟು ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net