

ಭೋಪಾಲ್: ಮಹಿಳಾ ಕಾನ್ಸ್ಟೇಬಲ್ ಮೇಲಿನ ಗ್ಯಾಂಗ್ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಮಹಿಳಾ ಪೊಲೀಸ್ ಅಧಿಕಾರಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಮಧ್ಯಪ್ರದೇಶದಿಂದ ವರದಿಯಾಗಿದೆ.
ಮಹಿಳಾ ಅಧಿಕಾರಿಯ ಕಾರು ಚಾಲಕ ಆಕೆಯ ಮನೆಯ ಬಾತ್ರೂಮ್ನಲ್ಲಿ ಕ್ಯಾಮೆರಾ ಇಟ್ಟು ಬೆತ್ತಲೇ ವಿಡಿಯೋ ಚಿತ್ರೀಕರಿಸಿರುವ ಆರೋಪ ಕೇಳಿಬಂದಿದೆ. ವಿಡಿಯೋ ಡಿಲೀಟ್ ಮಾಡಬೇಕಾದರೆ 5 ಲಕ್ಷ ರೂಪಾಯಿ ಹಣ ಕೊಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದು, ಇದರಿಂದ ಆಘಾತಕ್ಕೆ ಒಳಗಾಗಿರುವ ಸಂತ್ರಸ್ತೆ ಮಹಿಳಾ ಅಧಿಕಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಾನ್ಸ್ಟೇಬಲ್ ಒಬ್ಬ ಮಹಿಳಾ ಅಧಿಕಾರಿಗೆ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಇದೇ ತಿಂಗಳ 22ರಂದು ಮಹಿಳಾ ಅಧಿಕಾರಿಯ ಮನೆಯನ್ನು ಪ್ರವೇಶಿಸಿರುವ ಕಾನ್ಸ್ಟೇಬಲ್ ಬಾತ್ರೂಮ್ ಬಾಗಿಲ ಕಿಂಡಿಯಲ್ಲಿ ಫೋನ್ ಕ್ಯಾಮೆರಾ ಇಟ್ಟು ರೆಕಾರ್ಡ್ ಮಾಡಿಕೊಂಡಿದ್ದಾನೆ. ಇದು ಗೊತ್ತಾದ ಕೂಡಲೇ ಸಂತ್ರಸ್ತೆ ತಕ್ಷಣ ಬಾಗಿಲು ತೆರೆದಾಗ ಆರೋಪಿ ಅಲ್ಲಿಂದ ಪರಾರಿ ಆಗಿದ್ದಾನೆ. ಮತ್ತೆ ಮಹಿಳಾ ಅಧಿಕಾರಿಯ ಮನೆಗೆ ಸೆ. 26ರಂದು ತೆರಳಿದ ಕಾನ್ಸ್ಟೇಬಲ್ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಕೊಡದೇ ಇದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದಾದ ಬಳಿಕ ಮಹಿಳಾ ಅಧಿಕಾರಿ ಹಿರಿಯ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ತಕ್ಷಣ ಭೋಪಾಲ್ ಅಪರಾಧ ವಿಭಾಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. (ಏಜೆನ್ಸೀಸ್)