

ಲಂಡನ್: ದುಬಾರಿ ಶುಲ್ಕ ವಸೂಲಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳಾದ ಓಲಾ, ಉಬರ್ ಮತ್ತು ರ್ಯಾಪಿಡೋ ಸೇವೆಯನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿದ್ದು, ಈ ವಿಚಾರವು ರಾಜ್ಯದಲ್ಲಿ ಭಾರಿ ಚರ್ಚೆಯಲ್ಲಿರುವಾಗಲೇ ಇಂಗ್ಲೆಂಡ್ನಲ್ಲಿ ಉಬರ್ಗೆ ಸಂಬಂಧಿಸಿದ ಹುಬ್ಬೇರಿಸುವ ಸಂಗತಿ ಬೆಳಕಿಗೆ ಬಂದಿದೆ.
ಕೇವಲ 15 ನಿಮಿಷದ ಪ್ರಯಾಣಕ್ಕೆ ಉಬರ್ ಕಂಪನಿಯು ಬ್ರಿಟಿಷ್ ಪ್ರಯಾಣಿಕರೊಬ್ಬರಿಗೆ 39,317 ಡಾಲರ್ ಅಂದರೆ, 32 ಲಕ್ಷ ರೂಪಾಯಿ ಚಾರ್ಜ್ ಮಾಡಿರುವುದನ್ನು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
22 ವರ್ಷದ ಒಲಿವರ್ ಕಪ್ಲಾನ್ ಅವರು ಇತ್ತೀಚೆಗೆ ಉಬರ್ ಕಾರನ್ನು ಆ್ಯಪ್ನಲ್ಲಿ ಬುಕ್ ಮಾಡಿದ್ದರು. ಇಂಗ್ಲೆಂಡ್ನ ಮ್ಯಾಂಚೆಸ್ಟರ್‌ನಲ್ಲಿರುವ ಬುಕ್ಸ್ಟನ್ ಹೋಟೆಲ್ನಲ್ಲಿ ಶೆಫ್ ಆಗಿರುವ ಕಪ್ಲಾನ್ ತಮ್ಮ ಕೆಲಸವನ್ನು ಮುಗಿಸಿದ ಬಳಿಕ ಹೋಟೆಲ್ನಿಂದ 4 ಮೈಲಿ ದೂರದ ವಿಚ್ವುಡ್ನಲ್ಲಿ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಉಬರ್ ಕಾರು ಬುಕ್ ಮಾಡಿದ್ದರು.
ಸಾಮಾನ್ಯವಾಗಿ ನಾನು ಕೆಲಸದಿಂದ ಮನೆಗೆ ಹೋಗುವ ದಾರಿಯಲ್ಲಿ ಆಗಾಗ ಉಬರ್ ಕಾರನ್ನು ಬುಕ್ ಮಾಡುತ್ತೇನೆ. ನಾನು ಪ್ರಯಾಣಿಸಿದಾಗಲೆಲ್ಲ 11 ರಿಂದ 12 ಡಾಲರ್ ವೆಚ್ಚವಾಗುತ್ತದೆ. ಆದರೆ, ಅಂದು ನಾನು ಬುಕ್ ಮಾಡಿದ್ದ ಸಮಯಕ್ಕೆ ಸರಿಯಾಗಿ ಬಂದ ಉಬರ್ ಚಾಲಕ, ನನ್ನನ್ನು ಪಿಕಪ್ ಮಾಡಿಕೊಂಡು ಹೊರಟನು. ಅದು 15 ನಿಮಿಷದ ಪ್ರಯಾಣವಾಗಿತ್ತು ಎಂದು ಕಪ್ಲಾನ್ ಹೇಳಿದರು.
ಕಪ್ಲಾನ್ ಪಾರಾಗಿದ್ದು ಹೇಗೆ?
ಎಡವಟ್ಟು ಆಗಿದ್ದೇನೆಂದರೆ, ಉಬರ್ ಚಾಲಕ, ಶೆಫ್ ಕಪ್ಲಾನ್ ತಲಪುವ ಸ್ಥಳವನ್ನು ಆಸ್ಟ್ರೇಲಿಯಾ ಎಂದು ಬದಲಾಯಿಸಿದ್ದ. ಇದಕ್ಕೆ ಕಾರಣ ಏನು ಎಂಬುದು ಖಚಿತವಾಗಿಲ್ಲದಿದ್ದರೂ, ಮ್ಯಾಂಚೆಸ್ಟರ್‌ನಲ್ಲಿರುವ ವಿಚ್‌ವುಡ್ ಬಾರ್ ಮತ್ತು ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ವಿಚ್‌ವುಡ್ ಪಾರ್ಕ್ ಹೆಸರಿನ ಗೊಂದಲದಿಂದ ಹೀಗಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಉಬರ್ ಕೂಡ ಪ್ರಕರಣವನ್ನು ಇತ್ಯರ್ಥ ಮಾಡಿಕೊಂಡಿದೆ.
ಈ ಪ್ರಕರಣ ನನ್ನನ್ನು ಎಲ್ಲಾ ರೀತಿಯ ಆರ್ಥಿಕ ತೊಂದರೆಗೆ ಸಿಲುಕಿಸಬಹುದಿತ್ತು. ಅದೃಷ್ಟವಶಾತ್ ಉಬರ್ ಅವರು ಆ ರೀತಿ ಮಾಡಲಿಲ್ಲ. ತಕ್ಷಣವೇ ಆಗಿರುವ ಸಮಸ್ಯಯನ್ನು ನೀಗಿಸಿದರು. ಆದರೆ, ಸಮಸ್ಯೆ ತಿಳಿದುಕೊಳ್ಳುವ ಮುನ್ನ ಅರ್ಧ ಗಂಟೆ ತುಂಬಾ ಹಿಂಸೆ ಅನುಭವಿಸಿದೆ ಎಂದು ಕಪ್ಲಾನ್ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)