

ಕೀಯೆವ್/ ಮಾಸ್ಕೋ: ಯೂಕ್ರೇನ್ ಮೇಲೆ ರಷ್ಯಾದ ದಾಳಿಯಿಂದಾಗಿ ಲಕ್ಷಾಂತರ ಸ್ಥಳೀಯ ಜನರು ದೇಶವನ್ನು ತೊರೆದು ಅಕ್ಕ-ಪಕ್ಕದ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಆಗ್ನೇಯ ಯೂಕ್ರೇನ್ನ ಝಪೊರೊಝೈ ನಗರದ 11 ವರ್ಷದ ಬಾಲಕನೊಬ್ಬ ಪಶ್ಚಿಮದ ನೆರೆಯ ರಾಷ್ಟ್ರ ಸ್ಲೊವಾಕಿಯಾಗೆ ನಡೆದು ಹೋಗಿರುವುದು ಇದೀಗ ಎಲ್ಲರ ಗಮನ ಸೆಳೆದಿದೆ.
ಬಾಲಕ ಎಲ್ಲರ ಗಮನ ಸೆಳೆಯಲು ಕಾರಣವೆಂದರೆ ಆತನ ಏಕಾಂಗಿ ಪ್ರಯಾಣ. ಈ ಬಗ್ಗೆ ಯೂಕ್ರೇನ್ನ ಆಂತರಿಕ ವ್ಯವಹಾರಗಳ ಸಚಿವಾಲಯ ಮಂಗಳವಾರ ವರದಿ ನೀಡಿದೆ. ತನ್ನ ಹಿರಿಯರಿಲ್ಲದೆ, ಕೈಯಲ್ಲಿ ತಾಯಿಯ ಪತ್ರವನ್ನು ಹಿಡಿದು ಏಕಾಂಗಿಯಾಗಿ ಬರೋಬ್ಬರಿ 1400 ಕಿ.ಮೀ ನಡೆದುಕೊಂಡು ಹೋಗಿ ಸ್ಲೊವಾಕಿಯಾವನ್ನು ತಲುಪಿದ್ದಾನೆ. ತನ್ನ ನಗು, ಎದೆಗಾರಿಕೆ ಮತ್ತು ದೃಢ ನಿಶ್ಚಯದಿಂದ ಎಲ್ಲರ ಮನಸ್ಸು ಗೆಲ್ಲುವ ಮೂಲಕ ನಿಜವಾದ ಹೀರೋ ಆಗಿದ್ದಾನೆ ಎಂದು ಸಚಿವಾಲಯ ಹೇಳಿದೆ. ಅಲ್ಲದೆ, ಬಾಲಕನ ಪಾಲಕರು ಅನಿವಾರ್ಯವಾಗಿ ಉಕ್ರೇನ್‌ನಲ್ಲಿ ಉಳಿಯಬೇಕಾದ್ದರಿಂದ ಹುಡುಗನೇ ಸ್ವತಃ ಗಡಿಗೆ ಹೋಗಿದ್ದಾನೆಂದು ಸಚಿವಾಲಯ ಹೇಳಿದೆ.
ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಹೈ ಕಮಿಷನರ್ ಮಾರ್ಚ್ 6 ರಂದು ಟ್ವೀಟ್ ಮಾಡಿದ್ದು, ಸುಮಾರು 1.5 ಮಿಲಿಯನ್ ಜನರು ಕಳೆದ 10 ದಿನಗಳಲ್ಲಿ ಯೂಕ್ರೇನ್ ತೊರೆದು ಬೇರೆಡೆಗೆ ಹೋಗಿದ್ದಾರೆಂದು ಹೇಳಿದೆ. ಅದರಲ್ಲಿ ಹೆಚ್ಚಿನ ಜನರು ಪೋಲ್ಯಾಂಡ್ಗೆ ಹೋಗಿದ್ದಾರೆ. 1 ಮಿಲಿಯನ್ಗೂ ಅಧಿಕ ಯೂಕ್ರೇನಿಯನ್ನರು ಪೋಲ್ಯಾಂಡ್ಗೆ ತೆರಳಿದ್ದಾರೆ.
ಫೆ. 24ರಂದು ರಷ್ಯಾ, ಯೂಕ್ರೇನ್ ಮೇಲೆ ಯುದ್ಧ ಘೋಷಿಸಿತು. ನ್ಯಾಟೋ ಪಡೆಗೆ ಸೇರುವ ಯೂಕ್ರೇನ್ ಆಸೆಯನ್ನು ರಷ್ಯಾ ತಿರಸ್ಕರಿಸುತ್ತಾ ಬಂದಿತ್ತು. ಅಲ್ಲದೆ, ಎಚ್ಚರಿಕೆಯನ್ನು ನೀಡಿತ್ತು. ಆದರೆ, ರಷ್ಯಾ ಎಚ್ಚರಿಕೆಗೆ ಬಗ್ಗದ ಯೂಕ್ರೇನ್ ನ್ಯಾಟೋ ಪಡೆ ಸೇರುವುದಾಗಿ ತಿಳಿಸಿತು. ಈ ವಿಚಾರದಲ್ಲಿ ಎರಡು ರಾಷ್ಟ್ರಗಳ ನಡುವೆ ತಿಕ್ಕಾಟ ಮುಂದುರಿದುಕೊಂಡೇ ಬಂದಿತ್ತು. ಅಂತಿಮವಾಗಿ ಫೆ.24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಯೂಕ್ರೇನ್ ವಿರುದ್ಧ ಘೋಷಣೆ ಮಾಡಿಯೇ ಬಿಟ್ಟರು.
ಫೆ.24ರಂದು ಶುರುವಾದ ಯುದ್ಧ ಇಂದಿನವರೆಗೂ ಮುಂದುವರಿದುಕೊಂಡು ಬರುತ್ತಲೇ ಇದೆ. ಇಂದಿಗೆ ಯುದ್ಧ ಆರಂಭವಾಗಿ 13 ದಿನಗಳಾಗಿವೆ. ಯಾವಾಗ ಅಂತ್ಯವಾಗುತ್ತದೋ ಎಂದು ಜನರು ಎದುರು ನೋಡುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ಮಂಡಿಸಿದರೂ ಅದಕ್ಕೆ ರಷ್ಯಾ ಕ್ಯಾರೆ ಎನ್ನಲಿಲ್ಲ. ಅಲ್ಲದೆ, ಅಮೆರಿಕ, ಜರ್ಮನಿ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಅನೇಕ ರಾಷ್ಡ್ರಗಳು ರಷ್ಯಾ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಿದರು ರಷ್ಯಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಯುದ್ಧವನ್ನು ಮುಂದವರಿಸಿದ್ದು, ಇಡೀ ಯೂಕ್ರೇನ್ ಅನ್ನು ಆಕ್ರಮಿಸಿಕೊಳ್ಳುವತ್ತ ಮುನ್ನುಗ್ಗುತ್ತಿದೆ. (ಏಜೆನ್ಸೀಸ್)