

ನವದೆಹಲಿ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದು, ಇಷ್ಟವಾದ ಬಟ್ಟೆ ಧರಿಸುವುದು ಹೆಣ್ಣು ಮಕ್ಕಳ ಹಕ್ಕು ಎಂದಿದ್ದಾರೆ.
ಉಡುಪಿಯ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸಲಿಲ್ಲ ಎಂಬ ಆರೋಪದ ನಂತರ ಆ ಆರು ವಿದ್ಯಾರ್ಥಿನಿಯರು ಕೋರ್ಟ್ ಮೆಟ್ಟಿಲೇರಿದ ಬಳಿಕ ಆರಂಭವಾದ ಹಿಜಾಬ್ ವಿವಾದವು ಇದೀಗ ರಾಜ್ಯಾದ್ಯಂತ ವ್ಯಾಪಿಸಿದೆ. ಅಲ್ಲದೆ, ಪುದಚೇರಿ ಮತ್ತು ಮಧ್ಯಪ್ರದೇಶಗಳಲ್ಲಿಯೂ ಈ ವಿವಾದ ಕೇಳಿಬರುತ್ತಿದೆ.
ಇದೀಗ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ಅದು ಬಿಕಿನಿಯೇ ಆಗಿರಲಿ, ಘೂಂಘಾಟ್ ಆಗಿರಲಿ, ಜೀನ್ಸ್ ಆಗಿರಲಿ ಅಥವಾ ಹಿಜಾಬ್ ಆಗಿರಲಿ ಯಾವ ಬಟ್ಟೆಯನ್ನು ಧರಿಸಬೇಕು ಎಂದು ನಿರ್ಧರಿಸುವುದು ಹೆಣ್ಣು ಮಕ್ಕಳ ಹಕ್ಕು. ಇದನ್ನು ಭಾರತೀಯ ಸಂವಿಧಾನವೇ ಖಚಿತಪಡಿಸಿದೆ. ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕಾ ಟ್ವೀಟ್ ಮಾಡಿದ ಬೆನ್ನಲ್ಲೇ ಟ್ವಿಟರ್ನಲ್ಲಿ ಬಿಕಿನಿ ಪದದ ಹ್ಯಾಶ್ಟ್ಯಾಗ್ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆ ಆರಂಭವಾಗಿದೆ.
ಇನ್ನೊಂದೆಡೆ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್ ಅವಿರತ ಪ್ರಯತ್ನ ಮಾಡುತ್ತಿದ್ದು, ಮಹಿಳೆಯರ ಹಕ್ಕುಗಳು ಮತ್ತು ಸಬಲೀಕರಣವನ್ನು ಮುಂದಿಟ್ಟುಕೊಂಡು ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಈ ಬಾರಿ ಹೆಚ್ಚು ಮಹಿಳೆಯರಿಗೆ ಕಾಂಗ್ರೆಸ್ ಸೀಟ್ ಅನ್ನು ನೀಡಲಾಗಿದೆ. (ಏಜೆನ್ಸೀಸ್)