

ಪಟನಾ: ಬಿಹಾರದ ರಾಜಧಾನಿ ಪಟನಾದಲ್ಲಿ ಸಂಶಯಾಸ್ಪದ ಭಯೋತ್ಪಾದಕ ಘಟಕವನ್ನು ಭೇದಿಸಿರುವ ಬಿಹಾರ ಪೊಲೀಸರು ಇಬ್ಬರು ಶಂಕಿತ ಉಗ್ರರರನ್ನು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಭಯೋತ್ಪಾದಕ ಘಟಕವು 2047ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ಸಂಚು ರೂಪಿಸುತ್ತಿತ್ತು ಎಂದು ತಿಳಿದುಬಂದಿದೆ. ಅಲ್ಲದೆ, ಜುಲೈ 12ರಂದು ಪ್ರಧಾನಿ ಮೋದಿ ಭೇಟಿಯ ವೇಳೆ ಅವರನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ್ದರು ಎಂಬ ಭಯಾನಕ ಅಂಶ ಶಂಕಿತ ಉಗ್ರರ ಬಂಧನದ ಬಳಿಕ ಬಯಲಾಗಿದೆ.
ಬಂಧಿತ ಶಂಕತ ಉಗ್ರರನ್ನು ಅಥರ್ ಪರ್ವೇಜ್ ಮತ್ತು ಜಲಾಲುದ್ದೀನ್ ಎಂದು ಗುರುತಿಸಲಾಗಿದೆ. ಪ್ರಧಾನಿ ಮೋದಿ ಭೇಟಿಗೂ ಮುನ್ನ 15 ದಿನಗಳಿಂದ ಬಿಹಾರದ ಫುಲ್ವರಿ ಷರೀಫ್ ಪ್ರದೇಶದಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಮೋದಿ ಅವರನ್ನು ಟಾರ್ಗೇಟ್ ಮಾಡಲು ಜುಲೈ 6 ಮತ್ತು 7ರಂದು ಸಭೆ ಸೇರಿ ಪ್ಲಾನ್ ಬಗ್ಗೆ ಚರ್ಚಿಸಿದ್ದರು ಎಂಬ ಅಂಶವು ಬೆಳಕಿಗೆ ಬಂದಿದೆ.
ಫುಲ್ವರಿ ಷರೀಫ್ನಲ್ಲಿರುವ ಶಂಕಿತ ಉಗ್ರರ ಕಚೇರಿ ಮೇಲೆ ಬಿಹಾರ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ 2047ಕ್ಕೆ 'ಭಾರತವು ಇಸ್ಲಾಮಿಕ್ ಭಾರತದ ಆಡಳಿತ ಕಡೆಗೆ' ಎಂಬ ಶೀರ್ಷಿಕೆಯುಳ್ಳ ದೋಷಾರೋಪಣೆ ದಾಖಲೆಗಳು ಪತ್ತೆಯಾಗಿವೆ. 25 ಪಿಎಫ್ಐ ಭಿತ್ತಿಪತ್ರಗಳನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಟನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ಸಂಭಾವ್ಯ ಭಯೋತ್ಪಾದಕ ಘಟಕ ಕಾರ್ಯನಿರ್ವಹಿಸುತ್ತಿದೆ ಎಂದು ಗುಪ್ತಚರ ದಳಕ್ಕೆ ಮಾಹಿತಿ ಸಿಕ್ಕಿತು. ಇದಾದ ಬಳಿಕ ಬಿಹಾರ ಪೊಲೀಸರು ಮತ್ತು ಕೇಂದ್ರ ಏಜೆನ್ಸಿಗಳು ಜುಲೈ 11 ರಂದು ನಯಾ ಟೋಲಾ ಪ್ರದೇಶದ ಮೇಲೆ ದಾಳಿ ನಡೆಸಿ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಈ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚಿನ ಯುವಕರು ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು ಮತ್ತು ಇತರ ಹಲವು ರಾಜ್ಯಗಳಿಂದ ಭಯೋತ್ಪಾದಕ ಸಂಚು ರೂಪಿಸಲು ತರಬೇತಿ ಪಡೆಯಲು ಬರುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಬಂಧಿತ ಶಂಕಿತ ಉಗ್ರರಿಬ್ಬರು ಭಾರತದಲ್ಲಿ ದೇಶ ವಿರೋಧಿ ಅಭಿಯಾನ ನಡೆಸಲು ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಿಂದ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)