ಸಂತಾನಹರಣ ಚಿಕಿತ್ಸೆ ನಡೆದ ಕೆಲವು ಗಂಟೆಗಳ ಬಳಿಕ ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

Hospital
Published on

ಬಾಗಲಕೋಟೆ: ಸಂತಾನಹರಣ ಚಿಕಿತ್ಸೆ ನಡೆದ ಕೆಲವೇ ಗಂಟೆಗಳ ಬಳಿಕ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಜಮಖಂಡಿ ನಗರದ ತಾಲೂಕು ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷದಿಂದ ಮಹಿಳೆ ಮೃತಪಟ್ಟಿದ್ದಾಳೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ನಿವಾಸಿ ನೀಲವ್ವ ಮಾಯಪ್ಪ ಹೂಗಾರ(25) ಮೃತ ಮಹಿಳೆ. ನಿನ್ನೆ ಆಸ್ಪತ್ರೆಯಲ್ಲಿ ಕ್ಯಾಂಪ್​ನಲ್ಲಿ ಸಂತಾನಹರಣ ಚಿಕಿತ್ಸೆಗೆ ದಾಖಲಾಗಿದ್ದಳು. ಈಗಾಗಲೇ ಮೂರು ಮಕ್ಕಳು ಆಗಿದ್ದರಿಂದ ಸಂತಾನಹರಣ ಚಿಕಿತ್ಸೆಗೆ ನೀಲವ್ವ ಬಂದಿದ್ದಳು.

ಮೂರನೇ ಹೆರಿಗೆ ಆಗಿ ಕೇವಲ ಎರಡು ತಿಂಗಳು ಆಗಿತ್ತು. ಸಂತಾನಹರಣ ಚಿಕಿತ್ಸೆ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನ ಇಂಜಕ್ಷನ್ ಕೊಟ್ಟ ಬಳಿಕ ನೀಲವ್ವ ಅಸ್ವಸ್ಥಳಾಗಿದ್ದಳು. ಚೇತರಿಸಿಕೊಳ್ಳಲು ಆಗದೇ ಇಂದು ನಸುಕಿನ ಜಾವ ನೀಲವ್ವ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇದೀಗ ನೀಲವ್ವಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಹಿಳೆ ಸಾವಿನ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net