

ಸೋಫಿಯಾ: 2020ನೇ ವರ್ಷ ಸಾಕಷ್ಟು ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿತು. ಕರೊನಾ, ನೆರೆ, ದಾಳಿಗಳು, ಲಾಕ್ಡೌನ್ ಹೀಗೆ ಸಾಲು ಸಾಲು ಸಮಸ್ಯೆಗಳು ಪೂರ್ತಿ ವರ್ಷವನ್ನೇ ಹಾಳು ಮಾಡಿತು. 2021ರಲ್ಲಾದರೂ ನೆಮ್ಮದಿಯ ಜೀವನ ಸಿಗಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ರೂಪಾಂತರಿ ರೂಪದಲ್ಲಿ ಎರಗಿದ ಮಹಾಮಾರಿ ಕರೊನಾ ಹಾಗೂ ವರುಣನ ಅಬ್ಬರ 2021ನೇ ವರ್ಷವನ್ನು ಜನರ ಪಾಲಿಗೆ ಕರಾಳ ವರ್ಷವನ್ನಾಗಿ ಮಾಡಿತು. ಇದೀಗ ಇಡೀ ವಿಶ್ವ 2022ನೇ ಹೊಸ ವರ್ಷವನ್ನು ಆದರದಿಂದ ಬರಮಾಡಿಕೊಳ್ಳಲು ಸಜ್ಜಾಗಿದೆ. ಕಳೆದ ಎರಡು ವರ್ಷಗಳಲ್ಲಿ ಅನುಭವಿಸಿದ ಕಹಿ ಘಟನೆಗಳಿಗೆ ಮುಂಬರುವ 2022ರಲ್ಲಾದರೂ ಸಿಹಿ ಸಿಗುತ್ತಾ ಎಂಬ ಭರವಸೆಯಿಂದ ಎದುರು ನೋಡುತ್ತಿದ್ದಾರೆ. ಆದರೆ, 2022 ಕೂಡ ನೀವೆಂದುಕೊಂಡಷ್ಟು ಸುಲಭವಾಗಿರದೆ, ಇನ್ನಷ್ಟು ಭೀಕರವಾಗಿರಲಿದೆ ಎಂದು ಒಬ್ಬರು ಭವಿಷ್ಯ ನುಡಿದಿದ್ದಾರೆ.
ಬಲ್ಗೇರಿಯನ್ನ ನಿಗೂಢ ಮಹಿಳೆ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ನಿಮಗೆ ಗೊತ್ತಿರಬಹುದು. 1996ರಲ್ಲಿಯೇ ಮೃತ ಪಟ್ಟಿರುವ ಈ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದಳು. ವಂಗಾ ಹೇಳಿರುವ ಪ್ರಕಾರ 2022ರಲ್ಲಿ ಸಾಕಷ್ಟು ದುರಂತಗಳು ಸಂಭವಿಸಲಿದೆಯಂತೆ. ಆ ದುರಂತಗಳು ಯಾವುವು ಅಂದರೆ, ಈ ಕೆಳಗಿನಂತಿವೆ...
ನೀರಿನ ಕೊರತೆ
ಬಾಬಾ ವಂಗಾ ಪ್ರಕಾರ 2022ರಲ್ಲಿ ಕುಡಿಯುವ ನೀರಿನ ಕೊರತೆ ಕಾಡಲಿದೆಯಂತೆ. ನದಿಗಳಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯದಿಂದ ನೀರಿನ ಹಾಹಾಕಾರ ಸೃಷ್ಟಿಯಾಗಲಿದೆ. ಆದರೆ, ಹೊಸ ನೀರಿನ ಮೂಲಗಳನ್ನು ಪಡೆದುಕೊಳ್ಳಲು ಅನೇಕರು ಇತರ ಪರಿಹಾರಗಳನ್ನು ಹುಡುಕುತ್ತಾರೆ ಎಂದಿದ್ದಾರೆ.
ಭಾರತದ ಮೇಲೆ ಮಿಡತೆ ದಾಳಿ
ಭಾರತದಲ್ಲಿ 2022ರಲ್ಲಿ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಮತ್ತು ಮಿಡತೆಗಳು ಬೆಳೆಗಳು ಮತ್ತು ಕೃಷಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತವೆ. ಇದರಿಂದ ಕ್ಷಾಮ ಉಂಟಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಏಲಿಯನ್ಗಳ ದಾಳಿ
2022ರಲ್ಲಿ ಭೂಮಿಯ ಮೇಲೆ ಏಲಿಯನ್ಗಳ ದಾಳಿಯಾಗುತ್ತದೆಯಂತೆ. ಊಮುವಾಮುವಾ ಹೆಸರಿನ ಕ್ಷುದ್ರ ಗ್ರಹವನ್ನು ಏಲಿಯನ್ಗಳು ಭೂಮಿಯತ್ತ ಕಳುಹಿಸಲಿದ್ದು, ಇದರಿಂದ ಭೂಮಿಗೆ ಭಾರೀ ಗಂಡಾಂತರ ಕಾದಿದೆ ಎಂದು ಹೇಳಿದ್ದಾರೆ.
ಸರ್ಬಿಯಾದಲ್ಲಿ ಹೊಸ ವೈರಸ್
ಈಗಾಗಲೇ ಕೋವಿಡ್ 19 ಇಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಇನ್ನೂ ಕೂಡ ಕರೊನಾದಿಂದ ಚೇತರಿಸಿಕೊಳ್ಳಲು ಆಗುತ್ತಿಲ್ಲ. ಇದೀಗ ಬಾಬಾ ವಂಗಾ ನುಡಿದಿರುವ ಭವಿಷ್ಯದ ಪ್ರಕಾರ 2022ರಲ್ಲಿ ಮತ್ತೊಂದು ಹೊಸ ಮಾರಾಣಾಂತಿಕ ವೈರಸ್ ಸರ್ಬಿಯಾದಲ್ಲಿ ಹುಟ್ಟಿಕೊಳ್ಳಲಿದೆಯಂತೆ. ಸದ್ಯ ಅದೀಗ ಹೆಪ್ಪುಗಟ್ಟಿದೆಯಂತೆ.
ಭೂಕಂಪಗಳು ಮತ್ತು ಸುನಾಮಿ
ಇದೇ ಬಾಬಾ ವಂಗಾ 2004ರಲ್ಲೂ ಸುನಾಮಿ ಭವಿಷ್ಯ ನುಡಿದಿದ್ದರು. ಇದೀಗ 2022ರಲ್ಲಿ ಸುನಾಮಿ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆಸ್ಟ್ರೇಲಿಯಾ ಸೇರಿದಂತೆ ಅನೇಕ ಏಷಿಯನ್ ದೇಶಗಳು ಪ್ರವಾಹಕ್ಕೆ ನಲುಗಲಿವೆ ಎಂದು ಭವಿಷ್ಯ ಹೇಳಿದ್ದಾರೆ.
ತಂತ್ರಜ್ಞಾನ ಸ್ವಾಧೀನ
2022ರಲ್ಲಿ ಹೆಚ್ಚು ಜನರು ಆನ್ಲೈನ್ನಲ್ಲಿ ಕಾಲ ಕಳೆಯುತ್ತಾರೆ. ಅಂದರೆ, ತಮ್ಮ ಮೊಬೈಲ್ ಹಾಗೂ ಗ್ಯಾಡ್ಜೆಟ್ಗಳಲ್ಲೇ ಮುಳುಗಿರುತ್ತಾರೆ. ಪರದೆಯ ಸಮಯ ಹೆಚ್ಚಾಗುತ್ತದೆ ಮತ್ತು ಅವರು ಫ್ಯಾಂಟಸಿಯನ್ನು ವಾಸ್ತವದೊಂದಿಗೆ ಗೊಂದಲಗೊಳಿಸುವುದರಿಂದ ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಿದೆ ಎಂದು ಬಾಬಾ ವಂಗಾ ಹೇಳಿದ್ದಾರೆ.
ಯಾರೀ ಬಾಬಾ ವಂಗಾ?
ಬಲ್ಗೇರಿಯಾದ ನಿಗೂಢ ಮಹಿಳೆ ಬಾಬಾ ವಂಗಾ, 1996ರಲ್ಲಿಯೇ ಮೃತಪಟ್ಟಿದ್ದರು. ಸ್ತನ ಕ್ಯಾನ್ಸರ್ಗೆ ಬಲಿಯಾದ ಅವರಿಗೆ ಬಾಲ್ಯದಿಂದಲೂ ಕಣ್ಣುಗಳೂ ಕಾಣಿಸುತ್ತಿರಲಿಲ್ಲ. ಆದರೆ ಜಗತ್ತಿನಲ್ಲಿ 51ನೇ ಶತಮನಾದವರೆಗೂ ಏನೇನು ಸಂಭವಿಸಲಿದೆ ಎನ್ನುವುದನ್ನು ಕಂಡುಕೊಂಡಿದ್ದರಂತೆ. 5079ನೇ ಇಸವಿಯವರೆಗೆ ಜಗತ್ತಿನಲ್ಲಿ ಏನೇನು ಸಂಭವಿಸಲಿದೆ ಎಂಬುದನ್ನು ಬಾಬಾ ವಂಗಾ ಮೊದಲೇ ತಿಳಿಸಿದ್ದಾರೆ. ಅವರ ನಂಬಿಕೆ ಪ್ರಕಾರ 5079ಕ್ಕೆ ಜಗತ್ತಿನ ಅಂತ್ಯವಾಗಲಿದೆ.
2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ 9/11ರ ದಾಳಿಯ ಬಗ್ಗೆ ವಂಗಾ ಭವಿಷ್ಯ ಹೇಳಿದ್ದರು. ಅದು ನಿಜವೂ ಆಗಿತ್ತು. ‘ಅಮೆರಿಕದ ಸಹೋದರರು ಲೋಹದ ಹಕ್ಕಿಗಳ ದಾಳಿಗೆ ಒಳಗಾಗಲಿದ್ದಾರೆ. ತೋಳಗಳು ಕೂಗಲಿವೆ, ಮುಗ್ಧರ ರಕ್ತದ ಕೋಡಿ ಹರಿಯಲಿದೆ’ ಎಂದು ಆಕೆ 1989ರಲ್ಲಿ ನುಡಿದಿದ್ದರು. (ಏಜೆನ್ಸೀಸ್)