ಮಸಾಜ್​ ಪಾರ್ಲರ್​ನಲ್ಲಿ ಮಹಿಳಾ ಉದ್ಯೋಗಿ ಮೇಲೆರಗಿದ ಯುವಕ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

Kerala Man
Published on

ಕೊಚ್ಚಿ: ಹಲ್ಲೆ ಮಾಡಿದ್ದಲ್ಲದೆ, ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದನೆಂದು ಆರೋಪಿಸಿ, ತನ್ನ ಪುರುಷ ಸಹೋದ್ಯೋಗಿಯ ವಿರುದ್ಧ ಆಯುರ್ವೇದ ಮಸಾಜ್​ ಕೇಂದ್ರದ ಮಹಿಳಾ ಉದ್ಯೋಗಿ ಒಬ್ಬರು ದೂರು ದಾಖಲಿಸಿದ್ದಾರೆ.

ಈ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಆರೋಪಿಯನ್ನು ಅಜಿತ್​ ನಾರಾಯಣನ್​ ಎಂದು ಗುರುತಿಸಲಾಗಿದೆ. ಈತ ಕಣ್ಣೂರಿನ ಪಯ್ಯವುರ್ ನಿವಾಸಿ. ಹಲ್ಲೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ಫುಟೇಜ್​ ಲಭ್ಯವಾಗಿದ್ದು, ಅದರಲ್ಲಿ ಆರೋಪಿ ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿರುವ ದೃಶ್ಯ ದಾಖಲಾಗಿದೆ. ಸಾಕಷ್ಟು ಸಾಕ್ಷ್ಯಾಧಾರ ಲಭ್ಯವಿದ್ದರೂ ಈವರೆಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ಸಂತ್ರಸ್ತೆ ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.

ಕಳೆದ ಸೋಮವಾರ ಮಸಾಜ್​ ಕೇಂದ್ರಕ್ಕೆ ಬಂದಿದ್ದ ಗ್ರಾಹಕರೊಬ್ಬರು ಅಲ್ಲಿ ನೀಡುವ ಸೇವೆಯ ವಿರುದ್ಧ ದೂರಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಅಜಿತ್​, ಸಂತ್ರಸ್ತೆ ಜತೆ ವಾಗ್ವಾದಕ್ಕೆ ಇಳಿದಿದ್ದ. ಈ ವೇಳೆ ಆಕೆಗೆ ಥಳಿಸಿದ್ದಾನೆ. ಅಲ್ಲದೆ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದನು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿಯನ್ನು ಸಹ ಜತೆಗೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಎರ್ನಾಕುಲಂ ಉತ್ತರ ಪೊಲೀಸ್ ಠಾಣೆಯ ಅಧಿಕಾರಿ, ಆರೋಪಿ ಅಜಿತ್​ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net