ಬಿಜೆಪಿ ವರಿಷ್ಠರ ಮುಂದೆ ಲೋಕ ಗೆಲುವಿಗೆ ಆರ್.ಅಶೋಕ್‌ ಸೂತ್ರ !

r ashoka
Published on

ಬೆಂಗಳೂರು: ದೆಹಲಿ ಪ್ರವಾಸದಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಲೋಕಸಭೆ ಚುನಾವಣೆಯಲ್ಲಿ ಗೆಲುವ ಸಾಧಿಸುವ ಸೂತ್ರಗಳನ್ನು ಮುಂದಿಟ್ಟಿದ್ದಾರೆ. ಜತೆಗೆ ವರಿಷ್ಠರ ಮೈತ್ರಿ ತಂತ್ರಗಾರಿಕೆಯನ್ನೂ ತಿಳಿದುಕೊಂಡು ಬೆಂಗಳೂರಿಗೆ ಮರಳಿದ್ದಾರೆ.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ವಿಧಾನಸಭೆ ಪ್ರತಿಪಕ್ಷ ನಾಯಕನ ಜವಾಬ್ದಾರಿ ನೀಡಿದ ನಂತರ ವರಿಷ್ಠರ ಮೊದಲ ಭೇಟಿಯಿದು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ‌ ಸಚಿವರನ್ನು ಭೇಟಿ ಮಾಡಿ ರಾಜ್ಯದ ಹಲವು ವಿಷಯಗಳನ್ನು ಚರ್ಚಿಸಿ, ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿರುವೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಏನೆಲ್ಲ ಮಾಡಬಹುದು ಎಂದು ವಿವರಿಸಿ ಮನವಿ ಮಾಡಿಕೊಂಡಿರುವೆ. ಜೆಡಿಎಸ್ ಜತೆಗೆ ಮೈತ್ರಿಗೆ ಸಂಬಂಧಿಸಿ ವರಿಷ್ಠರು ಹಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಚುನಾವಣೆ ಕಾರ್ಯತಂತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿಧಾನಸಭೆ, ಲೋಕಸಭೆ ಕ್ಷೇತ್ರಕ್ಕೊಬ್ಬ ಉಸ್ತುವಾರಿಯನ್ನು ನೇಮಿಸಲಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.

ದೇಶದ ಬಗ್ಗೆ ತೀರ್ಮಾನ

ಲೋಕಸಭೆ ಚುನಾವಣೆಯಲ್ಲಿ ದೇಶದ ಭವಿಷ್ಯ ಹಾಗೂ ಅಭಿವೃದ್ಧಿ ಬಗ್ಗೆ ತೀರ್ಮಾನಿಸಲಿದ್ದಾರೆ. ಮೋದಿಯವರ ದೂರದರ್ಶಿತ್ವ, ನಾಯಕತ್ವ ಎರಡನ್ನೂ ಜನರು ಮೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ ಸಿಎಂ ಕುರ್ಚಿ ಅಳಿವು, ಉಳಿವಿನ ಪ್ರಶ್ನೆಯಿದಲ್ಲವೆಂದು ಡಾ.ಯತೀಂದ್ರ‌ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಕಾಂಗ್ತೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಜನರು ತಲೆ ಕೆಡಿಸಿಕೊಂಡಿಲ್ಲ. ನಮಗಂತೂ ಸಂಬಂಧವೇ ಇಲ್ಲ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣ ಎಂದಿದೆ. ಗುಂಪುಗಾರಿಕೆಯ ಪೈಪೋಟಿ ನೋಡಿ, ಅಪ್ಪನ ಮೇಲೆ ಪ್ರೇಮದಿಂದ ಯತೀಂದ್ರ ಹಾಗೆ ಹೇಳಿರಬೇಕು ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.

ಪ್ರಭು ಶ್ರೀರಾಮಚಂದ್ರನ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ಖಂಡನೀಯ. ಅಯೋಧ್ಯೆ, ಶ್ರೀರಾಮ ಮಂದಿರ ಹಾಗೂ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಇದೀಗ ರಾಜಣ್ಣ ಅವರು ಶ್ರೀರಾಮನನ್ನು ಗೊಂಬೆಗೆ ಹೋಲಿಸಿದ್ದು, ಅವರ ಹೇಳಿಕೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡರೆ ಅವನತಿ ನಿಶ್ಚಿತವೆಂದು ಎಚ್ಚರಿಸಿದರು.

ನಿದ್ದೆಗೆ ರಾಯಭಾರಿ

ಸಿಎಂ ಸಿದ್ದರಾಮಯ್ಯ ಅವರು ನಿದ್ದೆಗೆ ರಾಯಭಾರಿಯಾಗಿದ್ದಾರೆ. ಅಂತಹವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ  ವ್ಯಂಗ್ಯಮಾಡಿರುವುದು ಹಾಸ್ಯಾಸ್ಪದ. ಸಭೆ, ಸಮಾರಂಭಗಳಲ್ಲಿ ಸಿದ್ದರಾಮಯ್ಯ ನಿದ್ದೆ ಮಾಡಿದ ಸಾವಿರಾರು ಫೋಟೊಗಳು ಸಿಗುತ್ತವೆ. ದಿನದ 18 ತಾಸು ಕೆಲಸ ಮಾಡುವ ಮೋದಿಯವರು ನಿದ್ದೆ ಮಾಡಿದ‌ ಒಂದೇ ಒಂದು ಫೋಟೊ ತೋರಿಸಲಿ ಎಂದು ಸವಾಲೆಸೆದರು.

ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ, ಬೊಕ್ಕಸ ಬರಿದಾಗಿದೆ. ರೈತರಿಗೆ ಪರಿಹಾರ ನೀಡಲು ಹಣವಿಲ್ಲ ಎಂದು ಸಿದ್ದರಾಮಯ್ಯ ಘೋಷಿಸಲಿ. ದೇಶದಲ್ಲಿ ಕರ್ನಾಟಕ ಮಾತ್ರವಲ್ಲ 17 ರಾಜ್ಯಗಳು ಬರಪೀಡಿತವಾಗಿವೆ. ಇನ್ಪುಟ್ ಸಬ್ಸಿಡಿ ಬಿಡುಗಡೆ ಮಾಡುವ ತೀರ್ಮಾನ ಕೈಗೊಳ್ಳುತ್ತಾರೆ. ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಏಳೆಂಟು ತಿಂಗಳು ತಡವಾಗಿ ಅಲ್ಪಮೊತ್ತ ಬಿಡುಗಡೆಯಾಗಿತ್ತು. ಆಗ ಕಾಂಗ್ರೆಸ್ ಸಂಸದರು ಬಾಯಿ ಬಿಟ್ಟು ಕೇಳಲಿಲ್ಲವೇಕೆ ? ಎಂದು ಆರ್.ಅಶೋಕ್ ವಾಗ್ದಾಳಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net