

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ಮತ್ತೆ ಅನುಮತಿ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟಿರುವ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವಿಷಯ ಮತ್ತೆ ಮುನ್ನೆಲೆಗೆ ಬಂದ ಬೆನ್ನಲ್ಲೇ ಈಗ ಬಿಜೆಪಿ ಖಂಡನೆ ವ್ಯಕ್ತಪಡಿಸಿದ್ದು, ಕೂಡಲೇ ಸಿಎಂ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಕಿಡಿಕಾರಿದೆ.
ಹಿಜಾಬ್ ವಿಚಾರ ಕುರಿತು ಸಿಎಂ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, "ಹಿಜಾಬ್ ವಿಷಯ ಹಠಾತ್ ಆಗಿ ಮುನ್ನೆಲೆಗೆ ಬಂದಿರುವುದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೊಡ್ಡ ಕುತಂತ್ರ ಅಡಗಿದೆ. ಗ್ಯಾರೆಂಟಿಗಳಿಂದ ಬರಿದಾದ ಖಜಾನೆ, ಅನುದಾನಕ್ಕಾಗಿ ಶಾಸಕರ ಒತ್ತಡ, ನಿಗಮ ಮಂಡಳಿ ನೇಮಕಕ್ಕೆ ಸೊಪ್ಪು ಹಾಕದ ಹೈಕಮಾಂಡ್ ಇವೆಲ್ಲದರಿಂದ ತಾವೇ ಸೃಷ್ಟಿಸಿಕೊಂಡ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ಸಿದ್ದಾಮಯ್ಯ ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ" ಎಂದು ಹೇಳಿದರು.
"ಜಾತಿ ಗಣತಿ ಕಾರ್ಡ್ ವಿಫಲ, ಉತ್ತರ-ದಕ್ಷಿಣ ಕಾರ್ಡ್ ಕೂಡ ವಿಫಲ.ಈಗ ಹಿಜಾಬ್ ಹಿಂತಿರುಗಿದೆ. ಕರ್ನಾಟಕದಲ್ಲಿ ಭರವಸೆ ಮತ್ತು ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವ ಸಿಎಂ ಸಿದ್ದರಾಮಯ್ಯ ಈಗ ತಮ್ಮ ಸರ್ಕಾರದ ಲೋಪದೋಷಗಳನ್ನು ಮರೆಮಾಚಲು ಹಿಜಾಬ್ ವಿಷಯವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿದೆ. ಎಲ್ಲವೂ ಸೋತಾಗ, ಡಿವೈಡ್ ಮತ್ತು ರೂಲ್ ಅನ್ನು ಪ್ರಾರಂಭಿಸಿ. ಇದು ಕಾಂಗ್ರೆಸ್ನ ಹಳೆಯ ತಂತ್ರವಾಗಿದೆ!" ಎಂದು ಟ್ವೀಟ್ ಮಾಡಿ, ಕಿಡಿಕಾರಿದ್ದಾರೆ.