ಕುರ್ಚಿಗಾಗಿ ಕಾದಾಟ, ಜನರ ಪರದಾಟ; ವಿಪಕ್ಷ ನಾಯಕ ಅಶೋಕ್

r ashoka
Published on

ಬೆಂಗಳೂರು: ಎರಡೂವರೆ ವರ್ಷಕ್ಕೆ ಅಧಿಕಾರ ಹಸ್ತಾಂತರವಾಗಬೇಕೆಂದು ಒಪ್ಪಂದವಾದರೂ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರ ಹಸ್ತಾಂತರಿಸಲು ಮನಸ್ಸಿಲ್ಲ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಸಿದ್ಧವಿಲ್ಲ. ಇವರ ಜಗ್ಗಾಟದ ನಡುವೆ ಗುತ್ತಿಗೆದಾರರು ದಯಾಮರಣಕ್ಕೆ ಕೋರಿದ್ದರೆ, ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಾಗುತ್ತಿದೆ. ಎಲ್ಲರೂ ಕುರ್ಚಿಗಾಗಿ ಕಾದಾಡುತ್ತಿದ್ದಾರೆ. ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆಯಾಗಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಧಿಕಾರ ಹಸ್ತಾಂತರಿಸಲು ಮನಸ್ಸಿಲ್ಲದ ಸಿದ್ದರಾಮಯ್ಯ, ಸಚಿವರನ್ನು ಛೂ ಬಿಟ್ಟಿದ್ದು, ಡಿ.ಕೆ.ಶಿವಕುಮಾರ್ ಒಬ್ಬಂಟಿಯಾಗಿದ್ದಾರೆ. ಅದಕ್ಕಾಗಿ ಅವರೀಗ ಹೈಕಮಾಂಡ್ ಪಾದದ ಬಳಿ ಕೂತಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಕಾದಾಟ ನಡೆಯುತ್ತಿರುವುದರಿಂದ ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆಯಾಗಿದೆ. ಒಂದು ಕಡೆ ಸಚಿವರಾದ ಜಾರಕಿಹೊಳಿ-ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಕಲಹವಿದ್ದರೆ, ಮತ್ತೊಂದು ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್-ಸಚಿವ ಜಾರಕಿಹೊಳಿ ನಡುವೆ ಕಲಹವಿದೆ ಎಂದು ಹೇಳಿದರು.

ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಸಿಎಂ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಇಂತಹ ಬಣ ಬಡಿದಾಟ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಹೀನಾಯವಾಗಲಿದೆ ಎಂದರು.

ಕೇಂದ್ರ ಸರ್ಕಾರ ಜನಗಣತಿ ನಡೆಸುತ್ತಿರುವಾಗ ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ವರದಿಯ ಬಗ್ಗೆ ಮಾತಾಡುತ್ತಿದೆ. ಜಾತಿ ಗಣತಿ ವರದಿಯನ್ನು ಬೀದಿಬೀದಿಯಲ್ಲಿ ಜನರು ನೋಡಿದ್ದಾರೆ. ಅದು ಈಗಾಗಲೇ ಬಹಿರಂಗವಾಗಿದೆ. ಸಿಎಂ ಸಿದ್ದರಾಮಯ್ಯ ಹೇಳಿ ಬರೆಸಿರುವ ವರದಿ ಇದಾಗಿದ್ದು, ಯಾವುದೇ ರಹಸ್ಯ ಉಳಿದಿಲ್ಲ. ಎಲ್ಲರೂ ಒಪ್ಪುವಂತೆ ಜಾತಿ ಗಣತಿ ವರದಿ ತಯಾರಿಸಬೇಕು. ಒಕ್ಕಲಿಗರು ಹಾಗೂ ಲಿಂಗಾಯತರ ಸಂಖ್ಯೆ ಜಾಸ್ತಿ ಬರಬಾರದೆಂಬ ಕಾರಣಕ್ಕೆ ಒಡೆದು ಚೂರು ಮಾಡಲಾಗಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net