

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯ, ಸಚಿವರು ಹಾಗೂ ಶಾಸಕರು ಭಾಗಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದು, ಕಾಂಗ್ರೆಸ್ ಪಾಳಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದಿರುವ ಔತಣಕೂಟಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಡಿಸಿಎಂ ಡಿ.ಕೆ. ಶಿವಕುಮಾರ್ರನ್ನು (DK Shivakumar) ಉಲ್ಲೇಖಿಸಿ ವ್ಯಂಗ್ಯವಾಡಿದ್ದು, ಹೀಗೆ ಮುಂದುವರೆದರೆ ತಮ್ಮ ಕನಸು ಕನಸಾಗಿಯೇ ಉಳಿಯುವುದು ಮಾತ್ರ ಗ್ಯಾರೆಂಟಿ ಎಂದು ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆರ್. ಅಶೋಕ್ (R Ashok), ಅತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿದೇಶ ಪ್ರವಾಸಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಸಿಎಂ ಸಿದ್ದರಾಮಯ್ಯ ಬಣ, ಇತ್ತ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ 35 ಶಾಸಕರ ಡಿನ್ನರ್ ಮೀಟಿಂಗ್ ನಡೆಸಿ ಶಕ್ತಿ ಪ್ರದರ್ಶನ ಮಾಡಿದೆ. ಸ್ವಾಮಿ ಡಿ.ಕೆ.ಶಿವಕುಮಾರ್ ಅವರೇ, ಅಧಿಕಾರವನ್ನ ಒದ್ದು ಕಿತ್ತುಕೊಳ್ಳುತ್ತೇನೆ ಎಂದು ಸದನದಲ್ಲಿ ತಾವು ಅಬ್ಬರಿಸದ್ದನ್ನು ಕಾರ್ಯಗತ ಮಾಡುವ ಸಮಯ ಬಂದಿದೆ.
ಇನ್ನೂ ತಮ್ಮ ನಿವಾಸದಲ್ಲಿ ಔತಣಕೂಟ ಆಯೋಜಿಸಿದರ ಕುರಿತು ಮಾತನಾಡಿರುವ ಸತೀಶ್ ಜಾರಕಿಹೊಳಿ, ಹೊಸ ವರ್ಷದ ಹಿನ್ನೆಲೆಯಲ್ಲಿ ಔತಣಕೂಟವನ್ನು ಆಯೋಜಿಸಲಾಗಿತ್ತು. ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳುವ ಮೂಲಕ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
https://www.vijayavani.net/dysp-sexual-assault-video-goes-viral-in-social-media