

ಬೆಂಗಳೂರು: ರಾಜಧಾನಿಯ ನಗರದಲ್ಲಿ ಟ್ಯಾಂಕರ್ ಮಾಫಿಯಾ ಎಗ್ಗಿಲ್ಲದೇ ಮುಂದುವರೆದಿದ್ದು, ಜಲಮಂಡಳಿ ನಿಗದಿಪಡಿಸಿರುವ ದರಕ್ಕಿಂತ ದುಪ್ಪಟ್ಟು ಬೆಲೆ ತೆತ್ತು ಜನ ನೀರು ಖರೀದಿಸುವ ಪರಿಸ್ಥಿತಿ ತಂದಿಟ್ಟಿದೆ ಈ ನಾಲಾಯಕ್ ರಾಜ್ಯ ಸರ್ಕಾರ ಎಂದು ವಿಪಕ್ಷ ನಾಯಕ ಆರ್. ಅಶೋಕ ನೇರ ಆರೋಪ ಎಸಗಿದ್ದಾರೆ.
"ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ಸಂಪೂರ್ಣ ವಿಫಲಾವಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ. ಶಿವಕುಮಾರ್, ಟ್ಯಾಂಕರ್ ಮಾಫಿಯಾಗೆ ಸಂಪೂರ್ಣ ಶರಣಾಗಿ ಜನರನ್ನು ಸುಲಿಗೆ ಮಾಡಲು ತಾವೂ ಕೈಜೋಡಿಸಿದಂತಿದೆ. ಸರ್ಕಾರದ ಆದೇಶಕ್ಕೆ ಕ್ಯಾರೇ ಅನ್ನದೆ ಬಹುತೇಕ ಖಾಸಗಿ ಟ್ಯಾಂಕರ್ಗಳು ಇನ್ನೂ ನೋಂದಣಿಯೇ ಮಾಡಿಕೊಂಡಿಲ್ಲ. ಕಾಟಾಚಾರಕ್ಕೆ ನೋಂದಣಿ ಮಾಡಿಕೊಂಡಿರುವ ಟ್ಯಾಂಕರ್ಗಳು ಸರ್ಕಾರ ನಿಗದಿ ಮಾಡಿರುವ ದರಕ್ಕೆ ನೀರು ಕೊಡುತ್ತಿಲ್ಲ" ಎಂದಿದ್ದಾರೆ.
"ಇಷ್ಟೆಲ್ಲಾ ಗೊಂದಲಗಳಿಂದ ನೀರಿಲ್ಲದೆ ಬೆಂಗಳೂರಿನ ಜನತೆ ಪರದಾಡುತ್ತಿದ್ದರೆ ಕಾಂಗ್ರೆಸ್ ಸರ್ಕಾರ ಏನೂ ಆಗಿಲ್ಲವೆಂಬಂತೆ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಸರ್ಕಾರಕ್ಕೆ ನಿಜವಾಗಲೂ ನೀರಿನ ಸಮಸ್ಯೆ ಬಗೆಹರಿಸುವ ಬದ್ಧತೆಯಿದ್ದರೆ ನೊಂದಣಿ ಮಾಡಿಕೊಳ್ಳದ, ಸರ್ಕಾರದ ನಿಯಮ ಪಾಲಿಸದ ಟ್ಯಾಂಕರ್ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ವಾರ್ಡ್ಗಳಲ್ಲೂ ಮಾರ್ಷಲ್ಗಳನ್ನು ನೇಮಿಸಿ ಟ್ಯಾಂಕರ್ ಮೇಲೆ ನಿಗಾ ಇಡಬೇಕು" ಎಂದು ಸಲಹೆ ನೀಡಿದ್ದಾರೆ.
"ಈಗಿರುವ ಸಹಾಯವಾಣಿ ಜನರಿಗೆ ಸ್ಪಂದಿಸಲು ವಿಫಲವಾಗಿದ್ದು, ಸರ್ಕಾರ ಖಾಸಗಿ ಸಂಸ್ಥೆಗಳ ಸಹಾಯದಿಂದ ಒಂದು ವಾರ್ಡ್ಗೆ ಒಂದರಂತೆ ಕನಿಷ್ಠ 200 ದೂರವಾಣಿ ಲೈನ್ಗಳ ಸಂಪರ್ಕ ಹೊಂದಿರುವ ಕಾಲ್ ಸೆಂಟರ್ ತೆರೆದು ಜನರ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಬೇಕು" ಎಂದು ಹೇಳಿದ್ದಾರೆ.