

ಆಗ್ರಾ: ಬೀದಿ ನಾಯಿಯ ಮೇಲೆ ಹಲ್ಲೆ ಮಾಡಿದನೆಂದು ಸೆಕ್ಯುರಿಟಿ ಗಾರ್ಡ್ ಒಬ್ಬರಿಗೆ ತಾನು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿಕೊಂಡ ಮಹಿಳೆಯೊಬ್ಬಳು ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಭಾನುವಾರ ನಡೆದಿದೆ. ಈ ಬಗ್ಗೆ ಆಗ್ರಾ ಪೊಲೀಸರು ಮಾತನಾಡಿದ್ದು, ವಿಡಿಯೋದ ಗಂಭೀರತೆಯನ್ನು ಅರಿತುಕೊಂಡಿದ್ದೇವೆ ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿಕೊಂಡಿರುವ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.
2.10 ನಿಮಿಷದ ವಿಡಿಯೋ ತುಣುಕಿನಲ್ಲಿರುವ ಮಹಿಳೆ, ಸೆಕ್ಯುರಿಟಿ ಗಾರ್ಡ್ಗೆ ಬೆದರಿಕೆ ಹಾಕುತ್ತಿರುವುದನ್ನು ನೋಡಬಹುದಾಗಿ. ಬಿಜೆಪಿ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮನೇಕಾ ಗಾಂಧಿ ಅವರಿಗೆ ದೂರು ನೀಡುವುದಾಗಿ ಮಹಿಳೆ ಬೆದರಿಸಿದ್ದಾಳೆ.
ಎಲ್ಐಸಿ ಆಫೀಸರ್ ಕಾಲನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಸಂತ್ರಸ್ತ ಅಖಿಲೇಶ್ ಸಿಂಗ್ ಎಂಬುವರು ಮಹಿಳೆಯ ವಿರುದ್ಧ ದೂರು ನೀಡಿದ್ದಾರೆ. ಮಹಿಳೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ನ್ಯೂ ಆಗ್ರಾ ಪೊಲೀಸ್ ಠಾಣೆಯ ಎಸ್ಎಚ್ಒ ವಿಜಯ್ ವಿಕ್ರಮ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಂತ್ರಸ್ತ ಅಖಿಲೇಶ್ ತಾನು ಮಾಜಿ ಸೈನಿಕ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ನಾಯಿಯ ಮೇಲೆ ಹಲ್ಲೆ ಮಾಡಲಿಲ್ಲ. ನಾಯಿಯನ್ನು ಕಾಲನಿಯಿಂದ ದೂರ ಓಡಿಸುತ್ತಿದ್ದೆ ಎಂದಿದ್ದಾರೆ. ಆದರೆ, ವಿಡಿಯೋ ಬಿಡುಗಡೆ ಮಾಡಿರುವ ಆರೋಪಿ ಮಹಿಳೆ, ತಾನು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ನನ್ನ ಹೆಸರು ಡಿಂಪಿ ಮಹೇಂದ್ರು ಎಂದು ಪರಿಚಯ ಮಾಡಿಕೊಂಡಿದ್ದಾಳೆ. ಕಳೆದ 15-18 ವರ್ಷಗಳಿಂದ ಪ್ರಾಣಿ ಹಿಂಸೆಯ ವಿರುದ್ಧ ಕೆಲಸ ಮಾಡುತ್ತಿದ್ದೇವೆ. ನಾಯಿಯ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಕಾಲನಿಯಿಂದ ಎರಡ್ಮೂರು ದಿನಗಳ ಹಿಂದೆ ಕರೆ ಸ್ವೀಕರಿಸಿದೆ. ಆದರೆ, ನಾನು ಪಟ್ಟಣದಲ್ಲಿ ಇದ್ದಿದ್ದರಿಂದ ಬರಲು ಸಾಧ್ಯವಾಗಿರಲಿಲ್ಲ. ಕಟ್ಟಡದ ಮುಂದೆ ಗಲೀಜು ಮಾಡಿದೆ ಅಂತ ಒಂದು ನಾಯಿಯನ್ನು ಈ ಸೆಕ್ಯುರಿಟಿ ಈಗಾಗಲೇ ಕೊಲೆ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.
ಪ್ರಾಣಿಯ ಮೇಲೆ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಶನಿವಾರವು ಕೂಡ ನಾನು ಕರೆಯೊಂದನ್ನು ಸ್ವೀಕರಿಸಿದೆ. ಬಳಿಕ ನಾನು ಕಾಲನಿಗೆ ಬಂದೆ. ಈ ವೇಳೆ ಸೆಕ್ಯುರಿಟಿ ಕೋಲಿನಿಂದ ನಾಯಿಯನ್ನು ಬಾರಿಸುತ್ತಿದ್ದರು. ತಡೆಯಲು ಪ್ರಯತ್ನ ಮಾಡಿದೆ. ಆದರೂ ನಿಲ್ಲಿಸದೆ ನನ್ನನ್ನೇ ಥಳಿಸಲು ಆರಂಭಿಸಿದ. ಬಳಿಕ ನಾನು ಕೋಲನ್ನು ಕಿತ್ತುಕೊಂಡೆ. ವಿಡಿಯೋ ಮಾಡುವಂತೆ ತನ್ನ ಸ್ನೇಹಿತನಿಗೆ ಸೆಕ್ಯುರಿಟಿ ಹೇಳಿದ ಎಂದು ಮಹಿಳೆ ಹೇಳಿದ್ದಾರೆ. (ಏಜೆನ್ಸೀಸ್)