ಎಸ್​ಐ ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿಗೆ ಪೊಲೀಸಪ್ಪನ ಮತ್ತೊಂದು ಮುಖ ಗೊತ್ತಾಗಿ ಆತ್ಮಹತ್ಯೆಗೆ ಶರಣು!

Love
Published on

ಅನಂತಪುರ: ಸಬ್​ ಇನ್ಸ್​ಪೆಕ್ಟರ್​ ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿಯೊಬ್ಬಳು ವಂಚನೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ಶುಕ್ರವಾರ ನಡೆದಿದೆ.

ಸರಸ್ವತಿ ಮೃತ ದುರ್ದೈವಿ. ಶುಕ್ರವಾಗಿ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿ ಸಬ್​ ಇನ್ಸ್​ಪೆಕ್ಟರ್​ ವಿಜಯ್​ ಕುಮಾರ್​ ನಾಯಕ್​ನನ್ನು ಶನಿವಾರ ಬಂಧಿಸಲಾಗಿದೆ. ಸರಸ್ವತಿ ತಿರುಪತಿಯ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿನಿಯಾಗಿದ್ದಳು. ಸರಸ್ವತಿ ಮತ್ತು ನಾಯಕ್​ ಇಬ್ಬರು ಅನಂತಪುರ ಜಿಲ್ಲೆಯ ಪಮಿದಿ ಗ್ರಾಮದ ನಿವಾಸಿಗಳು. ಸರಸ್ವತಿಯನ್ನು ಪರಿಚಯ ಮಾಡಿಕೊಂಡಿದ್ದ ಎಸ್​ಐ ಆಕೆಯ ಪ್ರೀತಿಯ ನಾಟಕವಾಡಿದ್ದ. ಅಲ್ಲದೆ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಂಚಿಸಿದ್ದಾರೆ.

ಪ್ರೀತಿ ವಿಚಾರ ತಿಳಿದು ಸರಸ್ವತಿ ಕುಟುಂಬದವರು ಮದುವೆಗೆ ಸಿದ್ಧತೆ ನಡೆಸಿದ್ದರು. ಆದರೆ, ನಾಯಕ್​ಗೆ ಈಗಾಗಲೇ ಬೇರೊಬ್ಬಳ ಜತೆ ಮದುವೆ ಆಗಿರುವುದು ಸರಸ್ವತಿಗೆ ತಿಳಿದಿದೆ. ಅಲ್ಲದೆ, ಪ್ರೀತಿಯ ಹೆಸರಿನಲ್ಲಿ ವಂಚಿಸುವುದೇ ಎಸ್​ಐ ಕೆಲಸ ಎಂಬ ಸತ್ಯ ಆಕೆ ಗೊತ್ತಾಗಿದೆ. ಇದರಿಂದ ಮನನೊಂದ ಸರಸ್ವತಿ ಗುರುವಾರ ವಿಷ ಕುಡಿದಿದ್ದಳು. ಅಸ್ವಸ್ಥಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ.

ಈ ಸಂಗತಿ ಪೊಲೀಸ್​ ವರಿಷ್ಠಾಧಿಕಾರಿ ಫಕಿರಪ್ಪ ಕಾಗಿನೆಲ್ಲಿ ಅವರ ಗಮನಕ್ಕೆ ಬಂದಿದ್ದು, ಆರೋಪಿ ಎಸ್​ಐ ನಾಯಕ್​ನನ್ನು ಬಂಧಿಸುವಂತೆ ಆದೇಶ ಹೊರಡಿಸಿದ್ದರು. ಅದರಂತೆ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net